ಮೊಳಕಾಲ್ಮುರು:ಪಟ್ಟಣದ ಕನಕಯ್ಯನಹಟ್ಟಿಯಲ್ಲಿ ಯಾದವ ಸಮುದಾಯದ ಬುಡಕಟ್ಟು ಆಚರಣೆಗಳನ್ನು ಆನಾವರಣ ಮಾಡುವ ಈರಣ್ಣ ದೇವರ ಕಾರ್ತಿಕೋತ್ಸವಕ್ಕೆ ಸೋಮವಾರ ಚಾಲನೆ ನೀಡಲಾಯಿತು.
ಈರಣ್ಣ ದೇವರ ದೇವಸ್ಥಾನದಲ್ಲಿನ ಮೂರ್ತಿಯನ್ನು ಸೋಮವಾರ ಹೊರತೆಗೆದು ವಿಜೃಂಭಣೆಯ ಮೆರವಣಿಗೆ ಮೂಲಕ ಪಟ್ಟಣದ ಹೊರ ಭಾಗದ ಅರಣ್ಯ ಪ್ರದೇಶದಲ್ಲಿ ಈರಗಾರ್ ತಮ್ಮಜ್ಜ ಐಕ್ಯವಾದ ಸ್ಥಳಕ್ಕೆ ತೆರಳಿ ಪೂಜೆ ಸಲ್ಲಿಸಿ ನೇರಊಟಿ ಸ್ಥಳಕ್ಕೆ ಗಂಗಾ ಪೂಜೆಗೆ ಕರೆದೊಯ್ಯಲಾಯಿತು.
ರಾತ್ರಿ ಮೂರ್ತಿಯನ್ನು ಹಟ್ಟಿಗೆ ಕಳಸ ಹೊತ್ತ ಮಕ್ಕಳ ಜೊತೆ ಮೆರವಣಿಗೆ ಮೂಲಕ ವಾಪಾಸು ಕರೆತಂದು ಹಟ್ಟಿಯ ಹೊರಭಾಗದ ಸರಕಾರಿ ಶಾಲೆ ಸಮೀಪದಲ್ಲಿನ ದೇವರಕಟ್ಟೆಯ ಮೇಲೆ ದೇವರನ್ನು ತಾತ್ಕಾಲಿವಾಗಿ ನಿರ್ಮಿಸಿದ್ದ ಹಾವಿನ ಗೂಡಿನೊಳಗೆ ಪ್ರತಿಷ್ಠಾಪಿಸಿ ಸಮುದಾಯದ ಮುಖಂಡರು ಹಾಗೂ ಮಕ್ಕಳು ರಾತ್ರಿ ಪೂರ್ತಿ ನೃತ್ಯಗಳನ್ನು ಕೈಗೊಂಡು ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮಂಗಳವಾರ ಬೆಳಗಿನ ಜಾವ ದೇವರನ್ನು ಗುಡಿದುಂಬಿಸಿ ಸಂಜೆ ದಾಸೋಹ ಕಾರ್ಯಕ್ರಮ ಕೈಗೊಂಡು ಆನಂತರ ಕಾರ್ತಿಕೋತ್ಸವಕ್ಕೆ ತೆರೆ ಬೀಳಲಿದೆ.ನಾಗರಾಜಪ್ಪ, ಪೂಜಾರಿ ಈರಣ್ಣ, ಪತ್ರಕರ್ತರು ಹಾಗೂ ಮುಖಂಡರಾದ ಈರಣ್ಣ ಯಾದವ್, ಕೃಷ್ಣಪ, ಮಂಜುನಾಥ್, ನರಸಿಂಹ, ಈರಗಾರ್ ಚಿತ್ತಪ್ಪ, ಲಾಯರ್ ತಮ್ಮಣ್ಣ ಹಾಗೂ ಸಮುದಾಯದ ಹಿರಿಯರು ಹಾಗೂ ಮುಖಂಡರು ಪಾಲ್ಗೊಂಡಿದ್ದರು.
ವರದಿ : ಪಿಎಂ ಗಂಗಾಧರ