ತುರುವೇಕೆರೆ: ಉತ್ತಮ ಬದುಕನ್ನು ರೂಪಿಸಿಕೊಳ್ಳಲು ಭಾಷೆಯ ಅಗತ್ಯವಿದೆ. ಬೇರೆ ಭಾಷೆಗಳನ್ನು ಪ್ರೀತಿಯಿಂದ ಕಲಿಯಿರಿ, ಆದರೆ ಮಾತೃಭಾಷೆ ನಮ್ಮ ಉಸಿರು, ಅದರಲ್ಲಿ ಜೀವಿಸಿ ಎಂದು ದೇವರಮನೆ ಎಜುಕೇಷನ್ ಟ್ರಸ್ಟ್ ಸಂಸ್ಥಾಪಕ ಗಂಗಾಧರ ದೇವರಮನೆ ತಿಳಿಸಿದರು.
ತಾಲ್ಲೂಕಿನ ದಂಡಿನಶಿವರದ ಶ್ರೀ ಹೊನ್ನಾದೇವಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಐ.ಕ್ಯೂ.ಎ.ಸಿ. ವತಿಯಿಂದ ಕನ್ನಡ ಮತ್ತು ಇಂಗ್ಲಿಷ್ ವಿಭಾಗಗಳ ಸಹಯೋಗದಲ್ಲಿ ಆಯೋಜಿಸಿದ್ದ ಭಾವ ಬದುಕಿಗಾಗಿ ಭಾಷೆ ಎಂಬ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡಿದ ಅವರು, ಭಾರತ ವೈವಿದ್ಯತೆಯ ದೇಶವಾಗಿದ್ದು, ವಿವಿಧ ಸಂಸ್ಕೃತಿ, ಭಾಷೆ, ಸಂಸ್ಕಾರ, ಜಾತಿ, ಧರ್ಮಗಳ ತವರೂರಾಗಿದೆ. ದೇಶದ ಪ್ರತಿ ರಾಜ್ಯದವರಿಗೊಂದು ಮಾತೃಭಾಷೆಯಿದೆ. ಎಲ್ಲಾ ಭಾಷೆಯನ್ನು ಸಂವಹನಕ್ಕಾಗಿ, ನಮ್ಮ ಬದುಕಿನ ಬೆಳವಣಿಗೆಗಾಗಿ ಕಲಿಯಬೇಕಿದೆ. ಪ್ರಸ್ತುತ ಸ್ಪರ್ಧಾತ್ಮಕ ಯುಗದಲ್ಲಿ ಆಂಗ್ಲಭಾಷೆಯ ಕಲಿಕೆ ಅತ್ಯಂತ ಮಹತ್ವವನ್ನು ಪಡೆದಿದೆ. ಆಂಗ್ಲಭಾಷೆ ಕಲಿಕೆಯಿಂದ ದೇಶ ವಿದೇಶಗಳಲ್ಲಿ ಅಧ್ಯಯನ ಸೇರಿದಂತೆ ಉದ್ಯೋಗ ಪಡೆಯಲು ನೆರವಾಗುತ್ತದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆಯಲು ಆಂಗ್ಲಭಾಷೆ, ಹಿಂದಿ ಭಾಷೆಯ ಕಲಿಕೆ ಅಗತ್ಯವಾಗಿದೆ. ಮಾತೃಭಾಷೆ ನಮ್ಮ ನೆಲದ ಭಾಷೆಯಾಗಿದ್ದು ಅದರಲ್ಲಿ ಜೀವಿಸುವುದು ಸಹ ಅಷ್ಟೇ ಅಗತ್ಯವಾಗಿದೆ ಎಂದರು.
ಕನ್ನಡ ನೆಲ, ಜಲ, ಭಾಷೆ, ಸಂಸ್ಕೃತಿಗೆ ವಿಶ್ವದಲ್ಲೇ ಅತ್ಯಂತ ಉನ್ನತವಾದ ಮಾನ್ಯತೆ, ಗೌರವವಿದೆ. ಅದನ್ನು ಕಾಪಾಡುವ ನಿಟ್ಟಿನಲ್ಲಿ ನಾವೆಲ್ಲರೂ ಸಂಸ್ಕಾರವಂತರಾಗಿ ಮೌಲ್ಯಯುತ ಬದುಕನ್ನು ಸಾಗಿಸಬೇಕಿದೆ. ಹತ್ತಾರು ಭಾಷೆಗಳನ್ನು ಕಲಿತ ಮಾತ್ರಕ್ಕೆ ಗೌರವ ಬರುವುದಿಲ್ಲ, ಹತ್ತಾರು ಜನರ ನಡುವೆ ಸಮಾಜದಲ್ಲಿ ನಾವು ನಡೆದುಕೊಳ್ಳುವ ರೀತಿ ನಮ್ಮನ್ನು ಎತ್ತರದ ಸಾಲಿನಲ್ಲಿ ಗೌರವಯುತ ಸ್ಥಾನದದಲ್ಲಿ ನಿಲ್ಲಿಸುತ್ತದೆ ಎಂದ ಅವರು, ಸಂಸ್ಕಾರದಲ್ಲಿ ಶ್ರೀಮಂತಿಕೆಯಿರಬೇಕೇ ವಿನಃ ಉಡುಗೆ ತೊಡುಗೆಯಲ್ಲಿ, ವಸ್ತು ವಾಹನದಲ್ಲಿ ಅಲ್ಲ ಎಂದರು.
ಕಾಲೇಜಿನ ಪ್ರಭಾರಿ ಪ್ರಾಂಶುಪಾಲ, ಐ.ಕ್ಯೂ.ಎ.ಸಿ. ಸಂಚಾಲಕಿ ದ್ರಾಕ್ಷಾಯಿಣಿ ಅಧ್ಯಕ್ಷತೆ ವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಡಾ.ರಾಧ, ಆಂಗ್ಲಭಾಷೆ ವಿಭಾಗದ ಮುಖ್ಯಸ್ಥೆ ಲಾವಣ್ಯ, ಅಧ್ಯಾಪಕರುಗಳಾದ ಡಾ.ನಾಗೇಂದ್ರಪ್ಪ, ಡಾ.ವಸಂತಕುಮಾರಿ, ಗಿರೀಶ್, ಅಮೃತ, ಶಶಿ, ಕೃಷ್ಣ ಹಾಗೂ ಕಾಲೇಜಿನ ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್