ತುರುವೇಕೆರೆ : ತಾಲ್ಲೂಕಿನ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷರಾಗಿ ಹೆಚ್.ಆರ್.ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರು.

ಹಿಂದಿನ ಅಧ್ಯಕ್ಷ ಪ್ರಕಾಶ್ ಹಾಗೂ ಉಪಾಧ್ಯಕ್ಷ ಮೋಹನ್ ಕುಮಾರ್ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಅಧ್ಯಕ್ಷ ಸ್ಥಾನಕ್ಕೆ ಕೊಡಗೀಹಳ್ಳಿ ಜೋಗಿಪಾಳ್ಯದ ಸದಸ್ಯ ನಾಗರಾಜು, ಉಪಾಧ್ಯಕ್ಷ ಸ್ಥಾನಕ್ಕೆ ಹಾವಾಳದ ಸದಸ್ಯ ಹೆಚ್.ಆರ್.ನಂಜೇಗೌಡ ಅವರು ನಾಮಪತ್ರ ಸಲ್ಲಿಸಿದ್ದರು. ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಒಂದೊಂದೇ ನಾಮಪತ್ರ ಸಲ್ಲಿಕೆಯಾಗಿದ್ದರಿಂದ ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾಗಿ ನಾಗರಾಜು, ಉಪಾಧ್ಯಕ್ಷರಾಗಿ ಹೆಚ್.ಆರ್.ನಂಜೇಗೌಡ ಅವಿರೋಧವಾಗಿ ಆಯ್ಕೆಯಾದರೆಂದು ಚುನಾವಣಾಧಿಕಾರಿ, ಸಿಡಿಒ ಶ್ರೀನಿವಾಸ್ ಘೋಷಿಸಿದರು. ನೂತನ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಘೋಷಣೆಯಾಗುತ್ತಿದ್ದಂತೆ ಅಭಿಮಾನಿಗಳು ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ನೂತನ ಅಧ್ಯಕ್ಷ ನಾಗರಾಜು ಹಾಗೂ ಉಪಾಧ್ಯಕ್ಷ ನಂಜೇಗೌಡ ಮಾತನಾಡಿ, ಕೊಡಗೀಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ, ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲು ಸಹಕಾರ ನೀಡಿದ ಸದಸ್ಯರೆಲ್ಲರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಸಂಘದಲ್ಲಿ 450 ಮಂದಿ ಷೇರುದಾರರಿದ್ದು, ಸುಮಾರು 145 ಮಂದಿ ಸಂಘಕ್ಕೆ ಹಾಲು ಹಾಕುತ್ತಿದ್ದಾರೆ. ಸಂಘವು ಪ್ರತಿನಿತ್ಯ 900 ಲೀಟರ್ ಹಾಲು ಶೇಖರಿಸುತ್ತಿದ್ದು, ತಿಂಗಳಿಗೆ 16 ಲಕ್ಷರೂನಷ್ಟು ವಹಿವಾಟನ್ನು ನಡೆಸಿ ಉತ್ತಮ ಸಂಘವಾಗಿ ತಾಲ್ಲೂಕಿನಲ್ಲಿ ಹೆಸರುವಾಸಿಯಾಗಿದೆ. ಮುಂದಿನ ದಿನಗಳಲ್ಲಿ ತುಮುಲ್ ನಿರ್ದೇಶಕ ಮಹಲಿಂಗಯ್ಯ ಹಾಗೂ ಸಂಘದ ನಿರ್ದೇಶಕರ ಸಹಕಾರದೊಂದಿಗೆ ಸಂಘವನ್ನು ಮತ್ತಷ್ಟು ಅಭಿವೃದ್ದಿ ಪಥದಲ್ಲಿ ನಡೆಸುವುದು, ಷೇರುದಾರರಿಗೆ ಒಕ್ಕೂಟ ಹಾಗೂ ಸರ್ಕಾರದಿಂದ ದೊರೆಯುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಾಗುವುದು ಎಂದರು.
ನೂತನ ಅಧ್ಯಕ್ಷ ನಾಗರಾಜು ಹಾಗೂ ಉಪಾಧ್ಯಕ್ಷ ನಂಜೇಗೌಡ ಅವರನ್ನು ತುಮುಲ್ ನಿರ್ದೇಶಕ ಮಹಲಿಂಗಯ್ಯ, ಟೌನ್ ಸಹಕಾರ ಬ್ಯಾಂಕ್ ಅಧ್ಯಕ್ಷ ಹೆಚ್.ಆರ್. ರಾಮೇಗೌಡ, ಸಂಘದ ನಿರ್ದೇಶಕರಾದ ಹೆಚ್.ಆರ್.ವೇಣುಗೋಪಾಲ್, ಹೊನ್ನಪ್ಪ, ಕೆ.ಪಿ.ಮಹೇಶ್, ಉದಯ್ ಕುಮಾರ್, ಪ್ರಕಾಶ್, ತೋಪೇಗೌಡ, ಕೆಂಪಮ್ಮ, ಪ್ರೇಮ, ಕುಮಾರ್, ಮೋಹನ್ ಕುಮಾರ್, ಮುಖಂಡರಾದ ಶೇಷೇಗೌಡ, ವೀರಣ್ಣ, ರಮೇಶ್, ಪುಟ್ಟೇಗೌಡ, ಜೋಗಿಪಾಳ್ಯ ಶಿವರಾಜ್, ಮಹೇಂದ್ರ ಸೇರಿದಂತೆ ವಿವಿಧ ಹಳ್ಳಿಗಳ ಗ್ರಾಮಸ್ಥರು ಪುಷ್ಪಾಹಾರ ಅರ್ಪಿಸಿ ಅಭಿನಂದಿಸಿದರು.
ವರದಿ: ಗಿರೀಶ್ ಕೆ ಭಟ್




