ತುಮಕೂರು: ಒತ್ತಡದ ಕರ್ತವ್ಯ ನಿರ್ವಹಣೆಯ ನಡುವೆ ವೈಯಕ್ತಿಕ ಆರೋಗ್ಯಕ್ಕೂ ನೌಕರರು ಗಮನ ಕೊಡಬೇಕು. ಆರೋಗ್ಯದ ಹಿತದೃಷ್ಠಿಯಿಂದ ನೌಕರರು ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವುದು ಅನಿವಾರ್ಯವಾಗಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪ್ರಭು ಜಿ. ತಿಳಿಸಿದರು.
ತುಮಕೂರು ತಾಲ್ಲೂಕಿನ ನಾಗವಲ್ಲಿ ಗ್ರಾಮ ಪಂಚಾಯಿತಿಯ ಕರ್ನಾಟಕ ಪಬ್ಲಿಕ್ ಶಾಲೆ ಆವರಣದಲ್ಲಿ, ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ (ರಿ), ಹಾಗೂ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಅಧಿಕಾರಿಗಳ ಮತ್ತು ನೌಕರರ ಸಂಘ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ತಾಲೂಕು ಮಟ್ಟದ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ರೀಡೆಯಲ್ಲಿ ಪಾಲ್ಗೊಳ್ಳುವುದರಿಂದ ನಮ್ಮಲ್ಲಿ ಉತ್ಸಾಹ ಚಿಗುರೊಡೆಯುತ್ತದೆ. ಕ್ರೀಡೆಯು ನೌಕರರಲ್ಲಿ ದೈಹಿಕ, ಮಾನಸಿಕ ಸಾಮರ್ಥ್ಯವನ್ನು ಹೆಚ್ಚಿಸಲಿದೆ. ನಮ್ಮ ಆರೋಗ್ಯ ಪರಿಸ್ಥಿತಿಯನ್ನು ಸುಧಾರಿಸಿಕೊಳ್ಳಲು ಕ್ರೀಡಾಕೂಟ ಸಹಕಾರಿ. ವೃತ್ತಿಜೀವನದಲ್ಲಿ ಎದುರಾಗುವ ಒತ್ತಡ ಸನ್ನಿವೇಶಗಳನ್ನು ಸಮರ್ಪಕವಾಗಿ ನಿಭಾಯಿಸಲು ನೌಕರರು ಮುಂದಾಗಬೇಕು. ಕ್ರೀಡಾಕೂಟದಿಂದ ನೌಕರರಲ್ಲಿ ಬಾಂಧವ್ಯ, ಹೊಂದಾಣಿಕೆ ಹೆಚ್ಚಾಗುತ್ತದೆ’ ಎಂದರು.
ಕ್ರೀಡಾಕೂಟದಲ್ಲಿ ನಾಗವಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷೆ ಮಂಗಳಗೌರಮ್ಮ, ತಾಪಂ ಇಒ ಹರ್ಷಕುಮಾರ್ ಕೆ, ತಾಲೂಕು ಯೋಜನಾಧಿಕಾರಿ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ) ತಾಲೂಕು ಪಂಚಾಯತಿ ಸಿಬ್ಬಂದಿ, ತಾಲ್ಲೂಕಿನ ಎಲ್ಲಾ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು ಗ್ರಾಮ ಪಂಚಾಯತಿ ಸಿಬ್ಬಂದಿ ಭಾಗವಹಿಸಿದ್ದರು
ವರದಿ: ಗಿರೀಶ್ ಕೆ ಭಟ್