ಬೆಳಗಾವಿ : ಪರಿಷತ್ನಲ್ಲಿ ಬಿಜೆಪಿ ಎಂಎಲ್ಸಿ ಸಿ.ಟಿ.ರವಿ ಅವರು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ಧ ಬಳಸಿದ್ದಾರೆನ್ನಲಾದ ಅಶ್ಲೀಲ ಪದ ಬಳಕೆ ಸಂಘರ್ಷ ಮುಂದುವರಿದಿದೆ.
ಈ ಕುರಿತು ಆಕ್ರೋಶ ಹೊರಹಾಕಿರುವ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿ ರವಿ ವಿರುದ್ಧ ದೂರು ನೀಡುತ್ತೇನೆ.
ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಪತ್ರ ಬರೆಯುವೆ. ಅವಕಾಶ ಸಿಕ್ಕರೆ ಖುದ್ದು ಭೇಟಿಯಾಗಿ ವಿವರಣೆ ನೀಡುವುದಾಗಿ ತಿಳಿಸಿದರು.
ಅವಾಚ್ಯ ಪದ ಬಳಸಿ ನನ್ನನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ. ಕೆಟ್ಟ ಪದ ಕೇಳಿಸಿಕೊಂಡು ನೊಂದು ನೋವು ಅನುಭವಿಸುತ್ತಿರುವುದು ನಾನು. ಯಾವ ಕಾರಣಕ್ಕೆ ರವಿ ವಿರುದ್ಧ FIR ದಾಖಲಾಯಿತು. ಅದಕ್ಕೆ ಮೂಲ ಕಾರಣ ಏನು ಅಂತಾ ಅವರಿಗೆ ಗೊತ್ತಿಲ್ವಾ?.. ತಮ್ಮನ್ನು ಎನ್ಕೌಂಟರ್ ಮಾಡಲು ಪ್ಲ್ಯಾನ್ ನಡೆದಿತ್ತು ಅಂತಾ ಯಾವ ನಾಚಿಕೆ ಇಲ್ಲದೇ ಹೇಳುತ್ತೀರಲ್ಲ ಎಂದು ಬಿಜೆಪಿ ನಾಯಕರ ವಿರುದ್ಧ ಗುಡುಗಿದರು.
ರವಿ ಅವರೇ ನಿಮ್ಮ ಮೇಲೆ ಯಾವ ದೌರ್ಜನ್ಯ ಆಗಿದೆ? ಪೊಲೀಸರು ಅವರ ಜವಾಬ್ದಾರಿಯನ್ನು ಕಾನೂನು ಪಾಲಿಸಿಯೇ ನಿಭಾಯಿಸಿದ್ದಾರೆ. ಸುಳ್ಳು ಹೇಳುತ್ತಾ ರಾಜ್ಯದ ಜನರ ದಿಕ್ಕು ತಪ್ಪಿಸಬೇಡಿ. ಈ ಮಟ್ಟದ ರಾಜಕೀಯ, ನಾಟಕ ಮಾಡದಿರಿ ಎಂದು ವಾಗ್ದಾಳಿ ನಡೆಸಿದರು.