ಬೆಳಗಾವಿ : ಬೆಳಗಾವಿಯ ಅಧಿವೇಶನದ ಶತಮಾನೋತ್ಸವ ಹಿನ್ನೆಲೆಯಲ್ಲಿ ಸುವರ್ಣಸೌಧದ ಬಳಿ ಮಹಾತ್ಮ ಗಾಂಧಿ ಪುತ್ಥಳಿ ಅನಾವರಣ ಕಾರ್ಯಕ್ರಮಕ್ಕೆ ರತ್ನಗಂಬಳಿ ಹಾಕಿಸಿ ಆಹ್ವಾನಿಸುವೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಅವರು ಬಿಜೆಪಿ ಸಂಸದ ಜಗದೀಶ್ ಶೆಟ್ಟರ್ ಅವರ ಹೇಳಿಕೆ ಟಾಂಗ್ ನೀಡಿದರು.
ಗಾಂಧಿ ಅವರ ಪ್ರತಿಮೆ ಅನಾವರಣ ಕಾರ್ಯಕ್ರಮಕ್ಕೆ ಗೌರವಯುತವಾಗಿ ಆಹ್ವಾನ ಮಾಡಿಲ್ಲ ಎಂಬ ಶೆಟ್ಟರ್ ಅವರ ಆರೋಪದ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದರ ಅವರು, ಅವರ ಮನೆವರೆಗೂ ರತ್ನಗಂಬಳಿ ಹಾಕಿಸೋಣ. ನನ್ನ ಸಮ್ಮುಖದಲ್ಲೇ ಸಿಎಂ ಅವರಿಗೆ ಕರೆ ಮಾಡಿ ಆಹ್ವಾನ ನೀಡಿದ್ದಾರೆ. ಆರ್.ಅಶೋಕ್, ನಾರಾಯಣಸ್ವಾಮಿ, ಸಭಾಪತಿಗಳಿಗೆ ಆಹ್ವಾನ ನೀಡಿದ್ದಾರೆ.
ಆಹ್ವಾನ ಪತ್ರಿಕೆಯಲ್ಲಿ ಅವರ ಹೆಸರು ಸೇರಿಸಿದ್ದೇವೆ. ಆ ಕಾರ್ಯಕ್ರಮ ಬಿಡಿ, ಅವರ ಸರ್ಕಾರ ಇದ್ದಾಗ ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರ ಪಾರ್ಥಿವ ಶರೀರವನ್ನು ಗೌರವಯುತವಾಗಿ ಅಂತ್ಯ ಸಂಸ್ಕಾರ ಮಾಡಲು ಅವರಿಂದ ಸಾಧ್ಯವಾಗಿಲ್ಲ ಎಂದು ಡಿಕೆಶಿ ದೂರಿದರು.
ಅವರ ಬೀಗರಿಗೆ ಸರಿಯಾಗಿ ಅಂತ್ಯಸಂಸ್ಕಾರ ಮಾಡಲು ಸಾಧ್ಯವಾಗಲಿಲ್ಲವಲ್ಲ, ಅದರ ಬಗ್ಗೆ ಅವರು ಮೊದಲು ಮಾತನಾಡಲಿ. ಆಗ ಬಿಜೆಪಿ ನಾಯಕರರು ಯಾರೂ ಮಾತನಾಡಲಿಲ್ಲ. ವಿಶೇಷ ಮಿಲಿಟರಿ ವಿಮಾನದಲ್ಲಿ ಪಾರ್ಥೀವ ಶರೀರ ತಂದು ಅವರ ಕುಟುಂಬ ಸದಸ್ಯರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಲು ಆಗಲಿಲ್ಲ. ಆಗ ಶೆಟ್ಟರ್ ಅವರ ಬಾಯಿಗೆ ಏನಾಗಿತ್ತು” ಎಂದು ತಿರುಗೇಟು ನೀಡಿದರು.