ರಾಮದುರ್ಗ : ಬೆಳಗಾವಿ ಜಿಲ್ಲೆ ರಾಮದುರ್ಗ ತಾಲೂಕಿನ ಕಟಕೋಳ ಪ್ರಾಥಮಿಕ ಆರೋಗ್ಯ ಕೇಂದ್ರ ಒಂದು ಕಾಲದಲ್ಲಿ ಉತ್ತಮ ವೈದ್ಯಕೀಯ ಸೇವೆಗೆ ಹೆಸರುವಾಸಿಯಾಗಿದ್ದ ಈಗ ವೈದ್ಯರ ನಿರ್ಲಕ್ಷ್ಯದಿಂದ ರೋಗಗ್ರಸ್ತವಾಗಿದ್ದು, ತುರ್ತು ಚಿಕಿತ್ಸೆಯ ಅಗತ್ಯವಿದೆ. ಇದ್ದೂ ಇಲ್ಲದಂತಿರುವ ವೈದ್ಯರು, ದಾದಿಯರೇ ಉಪಚಾರ ಮಾಡುವ ಪರಿಸ್ಥಿತಿ, ಬಾಣಂತಿಯರಿಗೆ ಬಿಸಿ ನೀರಿನ ವ್ಯವಸ್ಥೆ ಇಲ್ಲ. ಶುದ್ದ ಕುಡಿಯುವ ನೀರು ಇಲ್ಲವೇ ಇಲ್ಲ, ಗಬ್ಬು ನಾರುತ್ತಿರುವ ಶೌಚಾಲಯಗಳು, ಹರಿದ ಬೆಡ್‌ಗಳು, ಫ್ಯಾನ್, ಹಾಸಿಗೆ ಇಲ್ಲ, ಕಲುಷಿತ ಪ್ರಯೋಗಾಲಯಸೇರಿದಂತೆ ಅನೇಕ ಸಮಸ್ಯೆಗಳ ಸುಳಿಯಲ್ಲಿಯೇ ರೋಗಿಗಳು ಪರದಾಡುವಂತಾಗಿದೆ.
20 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿರುವ ಗ್ರಾಮದಲ್ಲಿರುವ ಪಿಎಚ್‌ಸಿಗೆ ಸುತ್ತಲಿನ ಹತ್ತಾರು ಗ್ರಾಮಗಳು ಒಳಪಡುತ್ತವೆ. ಈಗಿರುವ ವೈದ್ಯರು ಸರಿಯಾಗಿ ಆಸ್ಪತ್ರೆಗೆ ಬರುವುದಿಲ್ಲ. ಬಂದರೂ ರೋಗಿಗಳನ್ನು ಸರಿಯಾಗಿ ಉಪಚರಿಸುತ್ತಿಲ್ಲ. ರೋಗಿಗಳಿಂದ ಹಣ ಅಪೇಕ್ಷೆ ಮಾಡುತ್ತಾರೆ. ಆಸ್ಪತ್ರೆಯಲ್ಲಿ ಔಷಧ ಲಭ್ಯವಿದ್ದರೂ ಹೊರಗಡೆ ತರಲು ಬರೆದು ಕೊಡುತ್ತಾರೆ. ಹೀಗಾದರೆ ಬಡವರು ಎಲ್ಲಿಗೆ ಹೋಗೋದು ಎಂಬುದು ರೋಗಿಗಳ ಅಳಲು.
ವೈದ್ಯರ ನಿರ್ಲಕ್ಷ್ಯದಿಂದಾಗಿ ತಿಂಗಳಲ್ಲಿ ಬೆರಳೆಣಿಯಷ್ಟು ಹೆರಿಗೆಗಳಾಗುತ್ತಿವೆ. ಹೆರಿಗೆ ಮಾಡಿಸಿಕೊಳ್ಳುವವರು ವೈದ್ಯರಲ್ಲ, ದಾದಿಯರು. ಅವರೇ ಎಲ್ಲವನ್ನೂ ನೋಡಿಕೊಳ್ಳಬೇಕು. ಹೆರಿಗೆ ಆದ ಮೇಲೂ ವೈದ್ಯರು ವಾರ್ಡಿಗೆ ಭೇಟಿ ನೀಡುವುದಿಲ್ಲ ಎಂದು ಬಾಣಂತಿಯರ ಪಾಲಕರು ಹೇಳುತ್ತಾರೆ. ಆಸ್ಪತ್ರೆಯ ಕಟ್ಟಡದಲ್ಲಿ ಅವಧಿ ಮೀರಿದ ಲಕ್ಷಾಂತರ ಮೌಲ್ಯದ ಔಷಧಿಗಳ ರಾಶಿಯೇ ಬಿದ್ದಿವೆ. ಅದರಲ್ಲಿ ಹತ್ತಾರು ಬಾಕ್ಸ್ ಗುಳಿಗೆ, ಲಸಿಕೆ, ಸರ್ಜಿಕಲ್ ವಸ್ತುಗಳು ಹಾಳುಬಿದ್ದು ಹೋಗಿವೆ.
ಸರಿಯಾಗಿ ಆಸ್ಪತ್ರೆ ಬಾರದ ವೈದ್ಯರ ಮೇಲೆ ಆಕ್ರೋಶಗೊಂಡ ಗ್ರಾಮಸ್ಥರು ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಿದರು ಟಿಎಚ್ ಅವರನ್ನು ಸ್ಥಳಕ್ಕೆ ಕರೆಯಿಸಿ ಮನವಿ ಕೂಡಾ ಸಲ್ಲಿಸಿದ್ದಲ್ಲದೆ ಡಿಎಚ್ ಒ ಹಾಗೂ ಆರೋಗ್ಯ ಸಚಿವರಿಗೂ ವೈದ್ಯರ ನಿರ್ಲಕ್ಷ್ಯದ ಬಗ್ಗೆ ಮನವಿ ಸಲ್ಲಿಸಿದ್ದಾರೆ.
ಕಟಕೋಳ ಆಸ್ಪತ್ರೆಯ ಪ್ರಯೋಗಾಲಯ ಅಸ್ತವ್ಯಸ್ಥ ಸ್ಥಿತಿಯಲ್ಲಿರುವುದು.
ಆಸ್ಪತ್ರೆಯ ಆವರಣದಲ್ಲಿರುವ ಹೆರಿಗೆ ವಾರ್ಡ್ ಪಕ್ಕದಲ್ಲಿ ಚರಂಡಿ ನೀರು ಹೊರಗೆ ಹರಿಯುತ್ತಿದ್ದು, ಅವರಣ ಕಲುಷಿತಗೊಂಡಿದೆ. ಸೊಳ್ಳೆಗಳ ಕಾಟ ವಿಪರೀತವಾಗಿದೆ. ರೋಗ ಹರಡುವ ಭೀತಿಯಲ್ಲಿಯೇ ಒಳರೋಗಿಗಳು ಕಾಲನೂಕುವ ಪರಿಸ್ಥಿತಿ ಇದೆ. ಆಸ್ಪತ್ರೆಯ ಆವರಣ ಶುಚಿಯಾಗಿಟ್ಟು ಕೊಳ್ಳುವ ಕನಿಷ್ಠ ಜವಾಬ್ದಾರಿ ಅಲ್ಲಿರುವ ಸಿಬ್ಬಂದಿಗೆ ಇಲ್ಲದಿರುವುದು ಖೇದಕರ ಸಂಗತಿ.
ಗುರುವಾರ ಬೆಳಿಗ್ಗೆ ಕಟಕೋಳ ಆಸ್ಪತ್ರೆಗೆ ಕರಕೊಂಡ ಬಂದಿವಿ ಸಂಜೆಯವರೆಗೂ ಡಾಕ್ಟರ್ ಬಂದ ನೋಡಲಿಲಿ. ನರ್ಸ ಬಾಯಿ ಬಂದು ನನ್ನ ಮಗಳ ಹೆರಿಗೆ ಮಾಡಿಸಿಕೊಂಡ್ರಿ. ಹರಿಗೆ ಆದ್ರೂ ಡಾಕ್ಟರ್ ಬಂದು ನೋಡಲಿಲ್ಲಾ. ನನಗೆ ಇಲ್ಲಿ ರಾತ್ರಿ ಇರೋದು ಬಾಳ ತ್ರಾಸ್ ಐತ್ರಿ. ಎಂದು ಹನಮವ್ವ ಅಡಗಲ್ಲ! ಸೂಳಿಕೇರಿ ನಿವಾಸಿಯರು ಹೇಳಿಕೆ ನೀಡಿದರು .
ಕಟಕೋಳ ಪಿಎಚ್ಸಿ ವೈದ್ಯ ಡಾ.ಎಂ.ಎಸ್.ಶಾಲದಾರ್ ಅವರ ಮೇಲೆ ಸಾರ್ವಜನಿಕರಿಂದ ಸಾಕಷ್ಟು ಆರೋಪಗಳು ಕೇಳಿ ಬಂದಿವೆ. ಈಗಾಗಲೇ ಅವರಿಗೆ ಮೌಖಿಕವಾಗಿ ಎಚ್ಚರಿಕೆ ನೀಡಿದ್ದೆ. ಆದರೂ ಅವರಲ್ಲಿ ಬದಲಾವಣೆಗಳಾಗಿಲ್ಲ, ಮೇಲಾಧಿ ಕಾರಿಗಳ ಗಮನಕ್ಕೆ ತಂದು ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ರಾಮದುರ್ಗ ತಾಲೂಕಿನ THO ಡಾ/. ನವೀನ ನಿಜಗುಲಿ ಭರವಸೆ ನೀಡಿದರು.
ವರದಿ : ಮಂಜುನಾಥ ಕಲಾದಗಿ