ಬೆಳಗಾವಿ: ನಗರದ ಹಿಂಡಲಗಾ ಜೈಲಿನಲ್ಲಿ 5ಜಿ ಜಾಮರ್ ಬಳಸಿರುವುದರಿಂದ ಸುತ್ತಮುತ್ತಲಿನ ಗ್ರಾಮಸ್ಥರಿಗೆ ಸಮಸ್ಯೆ ಆಗಿರುವ ಬಗ್ಗೆ ದೂರುಗಳು ಕೇಳಿ ಬರುತ್ತಿದೆ.
ಜೈಲಿನಲ್ಲಿರು ಖೈದಿಗಳ ಮೊಬೈಲ್ ಬಳಕೆಗೆ ಬ್ರೇಕ್ ಹಾಕುವ ಉದ್ದೇಶದಿಂದ 5ಜಿ ಜಾಮರ್ ಹಾಕುವ ನಿರ್ಧಾರಕ್ಕೆ ಬರಲಾಗಿತ್ತು.
ಆದರೆ ಈ ಜಾಮರ್ ನಿಂದಾಗಿ, ಖೈದಿಗಳಿಗಿಂತ, ಗ್ರಾಮಸ್ಥರಿಗೆ ಹೆಚ್ಚು ತೊಂದರೆ ಆಗುತ್ತಿದೆ. ಅಲ್ಲಿ ಈಗಾಗಲೇ ಅಳವಡಿಕೆಯಾಗಿದ್ದ 2ಜಿ ಜಾಮರ್ ಅನ್ನು ಬದಲಾಯಿಸಿ ಹಿಂಡಲಗಾ ಜೈಲಿನಲ್ಲಿ 5ಜಿ ಜಾಮರ್ ಅಳವಡಿಸಿದ್ದರಿಂದ ಜೈಲು ಪಕ್ಕದ ಹಳ್ಳಿಗಳಾದ ವಿಜಯನಗರ, ಗಣೇಶಪುರ, ಬೆನಕನಹಳ್ಳಿ ಸೇರಿದಂತೆ ಹಿಂಡಲಗಾ ಗ್ರಾಮಕ್ಕೆ ಸಾಕಷ್ಟು ಸಮಸ್ಯೆ ಆಗುತ್ತಿರುವುದಾಗಿ ದೂರುಗಳು ದಾಖಲಾಗಿವೆ.
ಸರ್ಕಾರಿ ಕಚೇರಿಗಳಲ್ಲಿ ನೆಟ್‌ವರ್ಕ್ ಸಿಗದೇ ಸರ್ವರ್ ಡೌನ್ ಆಗುತ್ತಿದ್ದರೆ, ಪರೀಕ್ಷೆಗೆ ತಯಾರಿ ನಡೆಸುತ್ತಿರುವ ವಿದ್ಯಾರ್ಥಿಗಳಿಗೂ ಸಾಕಷ್ಟು ಸಮಸ್ಯೆ ಆಗುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಳವಡಿಸಿರುವ ಜಾಮರ್‌ನ ಫ್ರೀಕ್ವೆನ್ಸಿ ಕಡಿಮೆ ಮಾಡುವಂತೆ ಜನಸಾಮಾನ್ಯರು ಮನವಿ ಮಾಡಿದ್ದಾರೆ.



