ಬೆಳಗಾವಿ: ಮಹಾ ಶಿವರಾತ್ರಿ ಹಿಂದೂಗಳ ಪವಿತ್ರ ಹಬ್ಬ. ಇದೊಂದು ಆಚರಣೆ, ಶಿವ- ಪಾರ್ವತಿಯರ ಸ್ಮರಣೆ ಮಹಾಶಿವರಾತ್ರಿಯ ವಿಶೇಷ. ಮಹಾಶಿವರಾತ್ರಿಯನ್ನು ನಾಳೆ ಫೆ. 26 ರಂದು ದೇಶಾದ್ಯಂತ ಹಾಗೂ ನಗರದಾದ್ಯಂತ ಸಡಗರ- ಸಂಭ್ರಮದಿಂದ ಆಚರಣೆ ಮಾಡಲಾಗುತ್ತಿದೆ.
ಶಿವನ ಆರಾಧಕರು ಶಿವರಾತ್ರಿಯ ದಿನ ಶಿವಲಿಂಗವನ್ನು ನೀರಿನಿಂದ ಹಾಗೂ ಹಾಲಿನಿಂದ ಅಭಿಷೇಕ ಮಾಡಿಸಿ ಪೂಜೆ ಮಾಡುತ್ತಾರೆ. ಮಹಾ ಶಿವರಾತ್ರಿಯಂದು ಒಂದು ಬಾರಿ ಇಲ್ಲವೇ ನಾಲ್ಕು ಬಾರಿ ಶಿವಲಿಂಗವನ್ನು ಪೂಜಿಸುತ್ತಾರೆ.
ನಗರಾದ್ಯಂತ ಸಿದ್ದತೆ: ಮಹಾಶಿವರಾತ್ರಿಯನ್ನು ಸಡಗರದಿಂದ ಆಚರಿಸಲು ನಗರಾದ್ಯಂತ ಸಿದ್ದತೆ ಮಾಡಿಕೊಳ್ಳಲಾಗಿದ್ದು, ಭಕ್ತ ಸಮೂಹ ಶಿವರಾತ್ರಿ ಸಂಭ್ರಮಕ್ಕೆ ಅಣಿಯಾಗಿದ್ದಾರೆ. ಶಿವರಾತ್ರಿ ದಿನ ಶಿವನ ಭಕ್ತರು ರಾತ್ರಿ ಈಡೀ ಜಾಗರಣೆ ಮಾಡಿ ಶಿವನ ಸ್ಮರಣೆ ಮಾಡುತ್ತಾರೆ.
ಕಪಿಲೇಶ್ವರ ಮಹಿಮೆ: ದಕ್ಷಿಣ ಭಾರತದ ಶಿವಕಾಶಿ ಎಂದೇ ಪ್ರಖ್ಯಾತಿಯಾದ ಕಪಿಲೇಶ್ವರ ದೇವಸ್ಥಾನದಲ್ಲಿ ಶಿವರಾತ್ರಿ ಆಚರಣೆಗೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ. ನಗರದಲ್ಲಿ ವೀರಭದ್ರೇಶ್ವರ ಪಲ್ಲಕ್ಕಿ ಉತ್ಸವ ಈ ಸಂದರ್ಭದಲ್ಲಿ ಸಡಗರದಿಂದ ನಡೆಯಲಿದೆ. ಕಣಬರ್ಗಿಯ ಸಿದ್ದೇಶ್ವರ ದೇವಸ್ಥಾನದಲ್ಲಿಯೂ ಶಿವನ ವಿಶೇಷ ಪೂಜೆ ಜರುಗುವುದು.
ಮಹಾಶಿವರಾತ್ರಿ ದಿನ ಶಿವನ ಭಕ್ತರು ಉಪವಾಸ ಮಾಡುವುದು ವಾಡಿಕೆ. ಈಡೀ ದಿನ ಭಕ್ತರು ಉಪವಾಸ ಮಾಡಲಿದ್ದು, ಉಪವಾಸ ದಿನ ತೀರಾ ಅತ್ಯಲ್ಪ ಆಹಾರ ಸೇವಿಸಿ ಇರುತ್ತಾರೆ. ಆ ಕಾರಣ ನಗರದಲ್ಲಿ ಭಕ್ತರು ಉಪವಾಸಕ್ಕೆ ಬೇಕಾದ ಕೆಲ ತಿಂಡಿಗಳನ್ನು ಅಂದರೆ ಶೇಂಗಾ, ಸಾಬುದಾನಿ ಖರೀದಿಯಲ್ಲಿ ತೊಡಗಿದ್ದಾರೆ.
ಬಿಲ್ವ ಪತ್ರಿ ವಿಶೇಷ: ಶಿವನಿಗೆ ಬಿಲ್ಲು ಪತ್ರಿಯಿಂದ ಪೂಜೆ ಮಾಡುವುದರೆಂದರೆ ತುಂಬಾ ಇಷ್ಟ ಹೀಗಾಗಿ ತಲೆ ತಲಾಂತರಗಳಿಂದ ಸಾಂಪ್ರದಾಯಿಕವಾಗಿ ಬಿಲ್ವ ಪತ್ರಿಯಿಂದ ಶಿವನನ್ನು ಪೂಜೆ ಮಾಡಿ ಅಲಂಕರಿಸಲಾಗುತ್ತದೆ. ಶಿವನು ತನ್ನನ್ನು ಯಾರು ಬಿಲ್ವ ಪತ್ರಿಯಿಂದ ಪೂಜಿಸುತ್ತಾರೋ ಅವರನ್ನು ಬಹುಬೇಗ ಹರಸಿ ಅವರ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ಬಹು ದಿನಗಳ, ಬಹು ಜನರ ನಂಬಿಕೆ.
ಹಳ್ಳಿ- ಹಳ್ಳಿಯಲ್ಲಿಯೂ ಆಚರಣೆ: ನಗರ, ಜಿಲ್ಲೆಯ ಜನರ ಜತೆಗೆ ರಾಜ್ಯದ ಹಳ್ಳಿ, ಹಳ್ಳಿಯಲ್ಲಿಯೂ ಮಹಾಶಿವರಾತ್ರಿ ಹಬ್ಬವನ್ನು ಅತಿ ಸಂಭ್ರಮದಿಂದ ಆಚರಿಸಲಾಗುತ್ತದೆ. ಪ್ರತಿ ಹಳ್ಳಿ- ಹಳ್ಳಿಯಲ್ಲಿಯೂ ಜನರು ಅಂದು ಉಪವಾಸ ವೃತ ಆಚರಿಸುವುದರ ಜತೆಗೆ ಶಿವಾಲಯಗಳಿಗೆ ತೆರಳಿ ವಿಶೇಷ ಪೂಜೆ ಸಲ್ಲಿಸುವರು. ಶಿವರಾತ್ರಿಯ ದಿನ ಭಜನಾ ತಂಡದವರು ಗ್ರಾಮ, ಗ್ರಾಮಗಳ ಮಠಗಳಲ್ಲಿ, ದೇವಸ್ಥಾನಗಳಲ್ಲಿ ಈಡೀ ರಾತ್ರಿ ಭಜನೆ ಮಾಡಿ ಶಿವನ ನಾಮಸ್ಮರಣೆ ಮಾಡುವರು.




