ತುರುವೇಕೆರೆ: ಪಟ್ಟಣದ 12 ನೇ ವಾರ್ಡಿನಲ್ಲಿರುವ ಸರ್ಕಾರಿ ಮಾದರಿ ನೂತನ ಹಿರಿಯ ಪ್ರಾಥಮಿಕ ಪಾಠಶಾಲೆಯ ಇ-ಖಾತಾ ಪತ್ರವನ್ನು ಶಾಲಾ ಮುಖ್ಯಶಿಕ್ಷಕರಿಗೆ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸ್ವಪ್ನ ನಟೇಶ್ ವಿತರಿಸಿದರು.
ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ಶಾಲೆಯ ಇ-ಖಾತಾ ಪ್ರಕ್ರಿಯೆಗೆ ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ ನಟೇಶ್, ವಾರ್ಡಿನ ಸದಸ್ಯ ಪ್ರಭಾಕರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಹಾಗೂ ಪಟ್ಟಣ ಪಂಚಾಯ್ತಿಯ ಎಲ್ಲಾ ಸದಸ್ಯರು ಬಹಳ ಮುತುವರ್ಜಿ ವಹಿಸಿ ಶಾಲೆಯ ಆಸ್ತಿಯನ್ನು ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಸಂಬಂಧಿಸಿದ ದಾಖಲೆಗಳನ್ನು ಮುಖ್ಯ ಶಿಕ್ಷಕರಿಂದ ಪಡೆದು ಕೆಲವೇ ದಿನಗಳಲ್ಲಿ ಇ-ಖಾತಾ ಮಾಡಿಕೊಟ್ಟು ಸರ್ಕಾರಿ ಶಾಲೆಯ ಆಸ್ತಿಗೆ ಭದ್ರತೆ ಒದಗಿಸಿದ್ದಾರೆ.
ಪಟ್ಟಣ ಪಂಚಾಯ್ತಿ ಅಧ್ಯಕ್ಷೆ ಸ್ವಪ್ನ್ ನಟೇಶ್ ಮಾತನಾಡಿ, ಶಾಲೆಗೆ ಇ-ಖಾತಾ ಮಾಡಿಕೊಡುವ ಬಗ್ಗೆ ಮುಖ್ಯ ಶಿಕ್ಷಕರು ಮನವಿ ಸಲ್ಲಿಸಿದಾಗ ಶಾಲೆಯ ದಾಖಲೆಗಳನ್ನು ತರಿಸಿಕೊಂಡು ಪರಿಶೀಲನೆ ನಡೆಸಲಾಯಿತು. ಶಾಲೆಯು ೭೫ ವರ್ಷಗಳ ಇತಿಹಾಸ ಹೊಂದಿದ್ದು, ಶಾಲೆಯಲ್ಲಿ ಓದಿದ ಸಾಕಷ್ಟು ಮಂದಿ ಸಮಾಜದಲ್ಲಿ ಉನ್ನತ ಸ್ಥಾನ ಅಲಂಕರಿಸಿರುವ ಮಾಹಿತಿ ದೊರೆಯಿತು. ಅಲ್ಲದೆ ಶಾಲೆಯ ಆಸ್ತಿ ಖಾಸಗಿಯವರ ಪಾಲಾಗಬಾರದೆಂಬ ದೃಷ್ಟಿಯಿಂದ ಪಂಚಾಯ್ತಿಯ ಎಲ್ಲಾ ಸದಸ್ಯರು, ಮುಖ್ಯಾಧಿಕಾರಿಗಳೊಂದಿಗೆ ಚರ್ಚಿಸಿ ಶಾಲೆಯ ಇ-ಖಾತಾಗೆ ಬೇಕಾದ ದಾಖಲೆಗಳನ್ನು ಮುಖ್ಯ ಶಿಕ್ಷಕರಿಂದ ಪಡೆದು ಶೀಘ್ರ ಇ-ಖಾತಾ ಮಾಡಿಕೊಡಲಾಗಿದೆ. ಸರ್ಕಾರಿ ಶಾಲೆಗಳನ್ನು ಹಾಗೂ ಶಾಲೆಯ ಆಸ್ತಿಯನ್ನು ಉಳಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.
ಮುಖ್ಯ ಶಿಕ್ಷಕ ನಂ. ರಾಜು ಮಾತನಾಡಿ, ಶಾಲೆಯ ಇ-ಖಾತಾವನ್ನು ಶೀಘ್ರ ಮಾಡಿಕೊಟ್ಟ ಪಪಂ ಅಧ್ಯಕ್ಷೆ ಸ್ವಪ್ನ ನಟೇಶ್, ವಾರ್ಡಿನ ಸದಸ್ಯ ಪ್ರಭಾಕರ್, ಮುಖ್ಯಾಧಿಕಾರಿ ಶ್ರೀನಾಥ್ ಬಾಬು ಹಾಗೂ ಎಲ್ಲಾ ಸದಸ್ಯರಿಗೆ, ಸಿಬ್ಬಂದಿಗೆ ಶಿಕ್ಷಣ ಇಲಾಖೆ ಹಾಗೂ ಶಾಲೆಯ ಪರವಾಗಿ ಕೃತಜ್ಞತೆಗಳನ್ನು ಸಲ್ಲಿಸುವುದಾಗಿ ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯ್ತಿ ಸದಸ್ಯರಾದ ಆರ್.ಮಧು, ಚಿದಾನಂದ್, ಯಜಮಾನ್ ಮಹೇಶ್ ಮುಂತಾದವರಿದ್ದರು.
ವರದಿ: ಗಿರೀಶ್ ಕೆ ಭಟ್




