ಬೆಂಗಳೂರು: ರಾಜ್ಯದ ಶಕ್ತಿ ಕೇಂದ್ರವಾಗಿರುವ ಬೆಂಗಳೂರಿನ ವಿಧಾನ ಸೌಧದಲ್ಲಿ ಫೆ.27ರಿಂದ ಪುಸ್ತಕ ಮೇಳ ಆರಂಭವಾಗಲಿದ್ದು, ಮಾ.3ರವರೆಗೆ ನಡೆಯಲಿದೆ.
ನಾಲ್ಕು ದಿನಗಳ ಕಾಲ ಸಾರ್ವಜನಿಕರಿಗೆ ವಿಧಾನ ಸೌಧದೊಳಗೆ ಬರಲು ಮುಕ್ತ ಅವಕಾಶ ನೀಡಲಾಗಿದೆ ಎಂದು ವಿಧಾನಸಭಾ ಸ್ಪೀಕರ್ ಯು.ಟಿ. ಖಾದರ್ ಮಾಹಿತಿ ನೀಡಿದ್ದಾರೆ.
ಬೆಂಗಳೂರು ವಿಧಾನಸೌಧದಲ್ಲಿ ಪುಸ್ತಕ ಸಮ್ಮೇಳನ ಆಯೋಜನೆ ಮಾಡುವ ಕುರಿತು ಸೋಮವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯದ ಇತಿಹಾಸದಲ್ಲಿಯೇ ಮೊಟ್ಟ ಮೊದಲ ಬಾರಿಗೆ ವಿಧಾನ ಸೌಧದಲ್ಲಿ ಬೃಹತ್ ಪುಸ್ತಕ ಮೇಳವನ್ನು ಆಯೋಜಿಸಿದ್ದೇವೆ.
ಸರ್ವರಿಗೂ ಇರುವ ವಿಧಾನ ಸೌಧದಲ್ಲಿ ಪುಸ್ತಕ ಪ್ರಕಾಶಕರನ್ನ ಗಮನದಲ್ಲಿಟ್ಟುಕೊಂಡು ಆಯೋಜಿಸಿದ್ದೇವೆ. ನಮ್ಮ ರಾಜ್ಯದಲ್ಲಿ ಸಾಹಿತ್ಯಕ್ಕೆ ಕೊಡುಗೆ ಕೊಡುವವರು ಪ್ರಕಾಶಕರು ಆಗಿದ್ದಾರೆ. ಪ್ರಕಾಶಕರಿಂದ ಸಾಹಿತ್ಯ ಜನರಿಗೆ ತಲುಪಲಿದೆ ಎಂದರು.
ಫೆ.27ರ ಸಂಜೆ 5 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೃಹತ್ ಪುಸ್ತಕ ಮೇಳವನ್ನು ಉಧ್ಘಾಟನೆ ಮಾಡಲಿದ್ದಾರೆ.
ಸರ್ಕಾರದ ಹಲವು ಸಚಿವರು ಹಾಗೂ ಪ್ರತಿಷ್ಠಿತ ಸಾಹಿತಿಗಳು ಕೂಡ ಈ ಪುಸ್ತಕ ಮೇಳದಲ್ಲಿ ಭಾಗಿಯಾಗಲಿದ್ದಾರೆ. ಮುಖ್ಯವಾಗಿ ಕನ್ನಡಕ್ಕೆ ಜ್ಞಾನಪೀಠ ಪ್ರಶಸ್ತಿ ತಂದುಕೊಟ್ಟ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಚಂದ್ರಶೇಖರ್ ಕಂಬಾರ್ ಮತ್ತು ಸಾಹಿತಿ ದಾಮೋದರ್ ಮೌಜು ಭಾಗಿಯಾಗುತ್ತಿದ್ದಾರೆ.
ಈ ಪುಸ್ತಕ ಮೇಳ ಫೆ.27ರಿಂದ ಮಾ.3ರವರೆಗೆ ಇರುತ್ತದೆ. ಪ್ರತಿದಿನ ಸಂಜೆ 5 ಗಂಟೆಗೆ ಮನರಂಜನಾ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದು ಮಾಹಿತಿ ನಿಡಿದರು.
ಮಾ.2ರ ಭಾನುವಾರದಂದು ಸಾಧು ಕೋಕಿಲ ನೇತ್ರತ್ವದಲ್ಲಿ ಮನೋರಂಜನಾ ಕಾರ್ಯಕ್ರಮ ನಡೆಯಲಿದೆ. ಫೆ.28ರಂದು ಪುಸ್ತಕ ಬಿಡುಗಡೆಗೂ ಅವಕಾಶ ಇದೆ. ಹೊಸ ಪುಸ್ತಕ ಬಿಡುಗಡೆ ಮಾಡುವ ಎಲ್ಲರಿಗೂ ಸೇರಿ ಒಂದು ಸ್ಟಾಲ್ ಕೊಡುತ್ತೇವೆ. ಬ್ಯಾರಿ, ತುಳು, ಕೊಂಕಣಿ, ಕನ್ನಡ ಅಕಾಡೆಮಿಗೂ ಒಂದೊಂದು ಸ್ಟಾಲ್ ಅನ್ನು ಮೀಸಲಿರಿಸಲಾಗಿದೆ.




