ಚಿತ್ರದುರ್ಗ : ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹಿಂದುತ್ವದ ಜಪ ಮಾಡುವುದು ಅವರ ಭಕ್ತಿ, ವ್ಯಕ್ತಿ ಸ್ವಾತಂತ್ರ್ಯವಾಗಿದೆ. ಹೀಗಾಗಿ ಅವರು ಹಿಂದುತ್ವ ಜಪ ಮಾಡಿದರೆ ತಪ್ಪೇನಿದೆ ಎಂದು ಸಚಿವ ಸತೀಶ್ ಜಾರಕಿಹೊಳಿ ಅವರು ಅಭಿಪ್ರಾಯಪಟ್ಟರು.
ಡಿಕೆಶಿ ಅವರು ಸಾಫ್ಟ್ ಹಿಂದುತ್ವ ಅನುಸರಿಸುತ್ತಿದ್ದಾರಾ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು, ಪೂಜೆ ಮಾಡುವುದು, ಕುಂಭಮೇಳಕ್ಕೆ ಹೋಗುವುದು ಅದು ಅವರವರ ಇಷ್ಟ.ಆ ಕುರಿತು ಪ್ರಶ್ನೆ ಯಾಕೆ ಮಾಡಬೇಕು. ಅದೆಲ್ಲವೂ ಅವರಿಗೆ ಬಿಟ್ಟದ್ದು ಎಂದರು.
ಹಿಂದುತ್ವ ಜಪ ಮಾಡುವುದು, ಬಿಡುವುದು ಅವರಿಗೆ ಬಿಟ್ಟ ಸಂಗತಿಯಾಗಿದ್ದು, ಈ ಕುರಿತು ನಾನು ಮೊದಲೇ ಹೇಳಿದ್ದೇನೆ. ಭಕ್ತಿ-ಪೂಜೆ ಏನು ಮಾಡಬೇಕೋ, ಬೇಡವೋ ಎಲ್ಲವೂ ವ್ಯಕ್ತಿಯ ಸ್ವಾತಂತ್ರ್ಯ. ಯಾರೂ ಇನ್ನೊಬ್ಬರ ಧಾರ್ಮಿಕ ಆಚರಣೆ, ನಂಬಿಕೆಗಳನ್ನು ತಪ್ಪು ಎಂದು ಹೇಳುವುದು ಸಮಂಜಸವಲ್ಲ. ಅವರ ನಡೆ ಬಗ್ಗೆ ನಮ್ಮನ್ನ ಕೇಳಿದರೆ ನಾವೇನು ಹೇಳಬೇಕು. ಇನ್ನು ಮಹಾರಾಷ್ಟ್ರದ ಏಕನಾಥ್ ಶಿಂಧೆ ಮಾದರಿಯ ನಡೆಯನ್ನು ಡಿಕೆಶಿ ಅವರು ತುಳಿಯುತ್ತಾರಾ ಎಂಬ ಪ್ರಶ್ನೆಗೆ ಅವರ ಬಳಿಯೇ ಉತ್ತರ ಕೇಳಿ ಎಂದು ತಿಳಿಸಿದರು.
ಇನ್ನು ನನ್ನ ನಂಬಿಕೆ ನಾನು ಕುಂಭ ಮೇಳಕ್ಕೆ, ಶಿವರಾತ್ರಿ ಜಾಗರಣೆಗೆ ಹೋಗಿದ್ದೆ. ನಾನು ಎಲ್ಲ ಧರ್ಮವನ್ನು ಗೌರವಿಸುತ್ತೇನೆ. ಧಾರ್ಮಿಕ ವಿಚಾರದಲ್ಲಿ ನನ್ನನ್ನು ಪ್ರಶ್ನೆ ಮಾಡುವುದು ಅಗತ್ಯವಿಲ್ಲ ಎಂದು ಡಿಕೆಶಿ ಅವರು ನಿನ್ನೆಯೇ ಸ್ಪಷ್ಟಪಡಿಸಿದ್ದರು.




