ಕ್ರೀಡೆ ಇಲ್ಲದ ಜೀವನ ಕೀಟ ತಿಂದ ಹಣ್ಣಿನಂತೆ.
ಶಿಗ್ಗಾಂವಿ : ತಾಲೂಕಿನ ಎತ್ತಿನಹಳ್ಳಿ ಗ್ರಾಮದಲ್ಲಿ ಭಾರತದ ಜನಪ್ರಿಯ ಕ್ರೀಡೆಯಾದ ಮಲ್ಲಕಂಬ ಮತ್ತು ರೂಪಕಾಂಬ ಕ್ರೀಡೆಯನ್ನು ಅಚ್ಚುಕಟ್ಟಾಗಿ ನಡೆಸಿದ್ದಾರೆ. ಯತ್ತಿನಹಳ್ಳಿ ಗ್ರಾಮದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಶ್ರೀ ಸಿದ್ದರಾಮೇಶ್ವರನ ಎಂಟನೆಯ ವರ್ಷದ ಜಾತ್ರಾ ಮಹೋತ್ಸವದ ಅಂಗವಾಗಿ ಕುಂದಗೋಳ ತಾಲ್ಲೂಕಿನ ಯಲಿವಾಳ ಗ್ರಾಮದ ಕಿತ್ತೂರ ರಾಣಿ ಚೆನ್ನಮ್ಮ ಸ್ವಯಂ ಸೇವಾಸಂಸ್ಥೆ ವತಿಯಿಂದ ಮಲ್ಲಕಂಬ ಮತ್ತು ರೂಪಕಂಬ ಎಂಬ ಪ್ರಸಿದ್ಧ ದೈಹಿಕ ಆಟವನ್ನು ಚಿಕ್ಕಚಿಕ್ಕ ಮಕ್ಕಳಿಂದ ಅದ್ಭುತ ಪ್ರದರ್ಶನ ಮಾಡಲಾಯಿತು.
ಭಾರತ ದೇಶದ ಈ ಪ್ರಸಿದ್ಧ ಕ್ರೀಡೆಯ ಬಗ್ಗೆ ಇತಿಹಾಸವೇ ಇದೆ ಮಲ್ಲಕಂಬವು ಯುದ್ಧ ತರಬೇತಿ ಅಂಗವಾಗಿಯೇ ರೂಪುಗೊಂಡಿರಬಹುದು ಪುರಾಣದ ಭೀಮ, ದುರ್ಯೋಧನ, ಜರಾಸಂಧ, ವಾಲಿ ಸುಗ್ರೀವ, ಹನುಮಂತ ಮುಂತಾದ ಮಲ್ಲರು ಕುಸ್ತಿ ಪಟ್ಟುಗಳನ್ನು ಅಭ್ಯಸಿಸಲು ದಪ್ಪ ಕಂಬದ (ಡೆಮಿ) ಬಳಸುತ್ತಿದ್ದರಂತೆ. ಶ್ರೀ ಕೃಷ್ಣ ಚಪಲತೆಗಾಗಿ ತೆಳುವಾದ ಕಂಬದ ಮೇಲೆ ಕಸರತ್ತು ಮಾಡಿದನಂತೆ. ಆದರೆ ಮಲ್ಲಕಂಬ ಕುರಿತು ನಿರ್ದಿಷ್ಟ ದಾಖಲೆ ಸಿಗುವುದು-ಕ್ರಿ.ಶ. 1135ರಲ್ಲಿ, ಕಲ್ಯಾಣ ಚಾಲುಕ್ಯ ಸೋಮೇಶ್ವರ ರಚಿಸಿದ ‘ಮಾನಸೋಲ್ಲಾಸ ಎಂಬ ವಿಶ್ವಕೋಶದಲ್ಲಿ; ಮಲ್ಲರು ಕಟ್ಟಿಗೆ ಕಂಬದ ಮೇಲೆ ಪಟ್ಟಗಳನ್ನು ಅಭ್ಯಸಿಸುತ್ತಿದ್ದರು ಎಂಬ ಉಲ್ಲೇಖವಿದೆ.
ಏಳು ಶತಮಾನಗಳ ನಂತರ ಮರಾಠಾ ದೊರೆ ಎರಡನೇ ಪೇಶ್ವೇ ಬಾಜಿರಾವ್‍ನ ಕಾಲದಲ್ಲಿ ಈ ಕ್ರೀಡೆಗೆ ವಿಶೇಷ ಪ್ರಾಧಾನ್ಯ ಲಭ್ಯವಾಯಿತು. ಇವನ ಆಶ್ರಿತ ಹಾಗೂ ಆಸ್ಥಾನ ಗುರು ಶ್ರೀ ಬಾಳಂಭಟ್ಟ ದಾದಾ ದೇವಧರ (1780-1840) ಉತ್ತಮ ಕುಸ್ತಿಪಟುವಲ್ಲದೆ ರಾಜ್ಯಾಂಗದ ದಕ್ಷ ಶಿಕ್ಷಕನೂ ಆಗಿದ್ದ. ಅಗಾಧ ಶಕ್ತಿ ಪ್ರದರ್ಶನ ಮಾಡುತ್ತಿದ್ದ ಈತನನ್ನು ಅವತಾರ ಪುರುಷನೆಂದು ಜನ ನಂಬಿದ್ದರು. ಶಕ್ತಿಯ ಜೊತೆಗೆ ಚಪಲತೆ, ಚಾಕಚಕ್ಯತೆ ಮೂಲಕ ಎದುರಾಳಿಗಳನ್ನು ಸದೆಬಡಿಯುವುದು ಸುಲಭವೆಂದು ನಂಬಿದ್ದ ಈತ, ಅಂಥ ವ್ಯಾಯಾಮಕ್ಕಾಗಿ ಬಳಸಿಕೊಂಡಿದ್ದು ಮಲ್ಲಕಂಬವನ್ನು.
ಮುಂದೆ ಬಾಳಂಭಟ್ಟ ಬನಾರಸದಲ್ಲಿ ಒಂದು ಕುಸ್ತಿ ಅಖಾಡಾ ಪ್ರಾರಂಭಿಸಿದರು. ಇದರಿಂದ ಉತ್ತೇಜಿತರಾದ ಅವರು ಅಮೃತಸರದಿಂದ ದಕ್ಷಿಣದ ರಾಮೇಶ್ವರದವರೆಗೆ ಸಂಚರಿಸಿ, ಕುಸ್ತಿಯಲ್ಲಿ ಅನೇಕ ಪ್ರಶಸ್ತಿ ಪಡೆಯುವುದರ ಜೊತೆಗೆ ಮಲ್ಲಕಂಬಕ್ಕೆ ಜನಪ್ರಿಯತೆಯನ್ನೊದಗಿಸಿಕೊಟ್ಟರು. ಆಗ ಮಲ್ಲಕಂಬದಲ್ಲಿ ಸ್ಥಿರ, ನೇತಾಡುವ, ಬಾಟಲಿ ಮೇಲಿನ ಬೆತ್ತದ ಹಾಗೂ ಹಗ್ಗದ ಹೀಗೆ ಅನೇಕ ಪ್ರಕಾರಗಳನ್ನು ಆವಿಷ್ಕರಿಸಿ ಪ್ರಚುರಪಡಿಸಿದರು. ಅವರ ಪ್ರಖ್ಯಾತಿಯಿಂದ ಮಲ್ಲಕಂಬ ಗರಡಿಮನೆಯ ಅವಿಭಾಜ್ಯ ಅಂಗವಾಯಿತು.
ಬಾಲಗಂಗಾಧರ ತಿಲಕರು ನಂತರ ಇದಕ್ಕೆ ಆಶ್ರಯದಾತರಾದರು. ಅವರೇ ಸ್ಥಾಪಿಸಿದ ಅಮರಾವತಿಯ ಹನುಮಾನ್ ವ್ಯಾಯಾಮಶಾಲೆಯಲ್ಲಿ ಮಲ್ಲಕಂಬದ ತರಬೇತಿಗೆ ಅವಕಾಶ ಕಲ್ಪಿಸಲಾಯಿತು. ಆಗ ಇದೊಂದು ಸ್ವತಂತ್ರ ಕ್ರೀಡೆಯಾಗಿ ರೂಪುಗೊಂಡಿತು. ಅಲ್ಲಿಂದ ಸಾವಕಾಶವಾಗಿ ಕಣ್ಮರೆಯಾಗುತ್ತ ಸಾಗಿದ್ದ ಈ ಕ್ರೀಡೆಗೆ ಪುನರ್ಜನ್ಮಮಧ್ಯಪ್ರದೇಶದ ಉಜ್ಜಯಿನಿಯಲ್ಲಿ ಶ್ರೀ ರಾಜೇಶ್ ಮತ್ತು ರಾಕೇಶ್ ಶ್ರೀವಾಸ್ತವ, ಡಾ. ಬಮ್ಶಂಕರ್ ಜೋಶಿ ಮತ್ತು ಇತರ ಕೆಲವು ಮಲ್ಲಖಂಬ ಉತ್ಸಾಹಿಗಳು ೨೧.೧೧.೧೯೮೦ ರಂದು ಅಖಿಲ ಭಾರತ ಮಟ್ಟದ ಸಂಘವನ್ನು ಸ್ಥಾಪಿಸಿದರು, ಇದನ್ನು ನಂತರ ಮಲ್ಲಖಂಬ ಫೆಡರೇಶನ್ ಆಫ್ ಇಂಡಿಯಾ ಎಂದು ಕರೆಯಲಾಯಿತು.
ಇದು ಈ ಕ್ರೀಡೆಯ ಇತಿಹಾಸವಾಗಿದೆ.

ವರದಿ : ರಮೇಶ್ ತಾಳಿಕೋಟಿ




