ಬಾಗಲಕೋಟೆ : ಪ್ರಥಮ ಪಿಯುಸಿ ಸ್ಟೂಡೆಂಟ್ ಪರೀಕ್ಷೆಯಲ್ಲಿ ಕಾಪಿ ಮಾಡುತ್ತಿದ್ದಳು ಎಂಬ ಆರೋಪ ಕೇಳಿಬಂದ ಹಿನ್ನೆಲೆ ಮನನೊಂದ ವಿದ್ಯಾರ್ಥಿನಿ ಮಹಾರಾಣಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮುಧೋಳದಲ್ಲಿ ನಡೆದಿದೆ. ತೇಜಸ್ವಿನಿ ದೊಡ್ಡಮನಿ (17) ಮೃತ ವಿದ್ಯಾರ್ಥಿನಿ.
ಶಾರದಾ ಪಿಯು ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ತೇಜಸ್ವಿನಿ ದೊಡ್ಡಮನಿ ಸೈನ್ಸ್ ಆಯ್ಕೆ ಮಾಡಿಕೊಂಡಿದ್ದಳು. ಫೆಬ್ರವರಿ 27 ರಂದು ಕೆಮಿಸ್ಟ್ರಿ ಪರೀಕ್ಷೆ ನಡೆಯುವ ವೇಳೆ, ತೇಜಸ್ವಿನಿ ನಕಲು ಮಾಡುವುದನ್ನು ಕಂಡ ಕಾಲೇಜು ಸಿಬ್ಬಂದಿ ಆಕೆಯನ್ನು ಪ್ರಶ್ನೆ ಮಾಡಿದ್ದಾರೆ.
ಆದ್ರೆ ಇದ್ರಿಂದ ಬೇಸರಗೊಂಡ ತೇಜಸ್ವಿನಿ ತನ್ನ ಪೋಷಕರಿಗೆ ಈ ವಿಷಯ ತಿಳಿಸಿದ್ದಾಳೆ. ಆ ನಂತರ ಪೋಷಕರ ಸಮ್ಮುಖದಲ್ಲಿ ತೇಜಸ್ವಿನಿಗೆ ಕಾಲೇಜು ಸಿಬ್ಬಂದಿ ಬುದ್ದಿವಾದ ಹೇಳಿದ್ದಾರೆ. ಇದ್ರಿಂದ ಮನನೊಂದ ವಿದ್ಯಾರ್ಥಿನಿ ಕಾಲೇಜಿನಿಂದ ಹೊರಗೆ ಓಡಿ ಹೋಗಿದ್ದಾಳೆ.
ಆ ಬಳಿಕ ಎಷ್ಟೇ ಹುಡುಕಿದರೂ ತೇಜಸ್ವಿನಿ ಪತ್ತೆಯಾಗಿರಲಿಲ್ಲ. ಹೀಗಾಗಿ ಆಕೆಯ ಪೋಷಕರು ಮುಧೋಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಇಂದು (ಮಾ.02) ಮಹಾರಾಣಿ ಕೆರೆಯಲ್ಲಿ ತೇಜಸ್ವಿನಿ ಶವವಾಗಿ ಪತ್ತೆಯಾಗಿದ್ದಾಳೆ.




