ತುರುವೇಕೆರೆ: ಅನುಭವಾತ್ಮಕ ಕಲಿಕೆಯಿಂದ ಮಕ್ಕಳಲ್ಲಿ ಜ್ಞಾನವೃದ್ದಿಯಾಗುವ ಜೊತೆಗೆ ಕಲಿತ ವಿದ್ಯೆ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ. ಅನುಭವಕ್ಕಿಂತ ದೊಡ್ಡ ಪಾಠ ಮತ್ತೊಂದಿಲ್ಲ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಪಠ್ಯದ ಜೊತೆಗೆ ಪಠ್ಯೇತರ ಅನುಭವಾತ್ಮಕ ಕಲಿಕೆಗೆ ಹೆಚ್ಚು ಒತ್ತನ್ನು ನೀಡಿ ಪರಿಪೂರ್ಣ ಜ್ಞಾನವಂತರನ್ನಾಗಿ ಮಾಡಬೇಕೆಂದು ಶ್ರೀ ಗಂಗಾಧರೇಶ್ವರ ಹೈನುಗಾರಿಕೆ ಟ್ರಸ್ಟ್ ಸಂಸ್ಥಾಪಕ ಡಾ.ಸುಧಾಕರ್ ಅಭಿಪ್ರಾಯಪಟ್ಟರು.
ತಾಲ್ಲೂಕಿನ ಆಲದಹಳ್ಳಿ ಗ್ರಾಮದ ಶ್ರೀ ಗಂಗಾಧರೇಶ್ವರ ಹೈನುಗಾರಿಕೆ ಟ್ರಸ್ಟ್ ಆವರಣದಲ್ಲಿ ಕಣತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಶಾಲೆಯ ಮಕ್ಕಳಿಗಾಗಿ ಆಯೋಜಿಸಲಾಗಿದ್ದ ಅನುಭವಾತ್ಮಕ ಕಲಿಕೆಯನ್ನು ಉತ್ತಮ ಪಡಿಸಲು ಕ್ಷೇತ್ರಭೇಟಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರ ರೂಪಿಸಿರುವ ಅನುಭವಾತ್ಮಕ ಕಲಿಕೆ ಎಂಬ ಪರಿಕಲ್ಪನೆ ಅತ್ಯುತ್ತಮವಾಗಿದೆ. ಇದರಿಂದ ಮಕ್ಕಳಲ್ಲಿ ಸಾಮಾಜಿಕ, ವ್ಯಾವಹಾರಿಕ ಹಾಗೂ ಪ್ರಾಪಂಚಿಕ ಜ್ಞಾನದ ಬಗ್ಗೆ ಅರಿವು ಮೂಡುತ್ತದೆ. ಕೇವಲ ಪಠ್ಯದ ಪುಸ್ತಕದ ಹುಳುವಾಗದೆ ಪರಿಸರ, ಸಂಸ್ಕೃತಿ, ಕೃಷಿ, ಹೈನುಗಾರಿಕೆಯ ಬಗ್ಗೆ ಅರಿವು, ಸಂಸ್ಕರಣಾ ಘಟಕಗಳು, ಉದ್ದಿಮೆಗಳ ಭೇಟಿ ಮಾಡಿ ಎಲ್ಲದರ ಬಗ್ಗೆ ತಿಳಿದುಕೊಳ್ಳುವ ಮೂಲಕ ವಿದ್ಯಾರ್ಥಿಗಳು ತಮ್ಮಲ್ಲಿರುವ ಕೌಶಲ್ಯವೃದ್ದಿಸಿಕೊಳ್ಳಲು ಸಹಕಾರಿಯಾಗಲಿದೆ ಎಂದರು.
ಕಣತೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಸರ್ಕಾರಿ ಶಾಲೆಗಳಿಗೂ ಅಗತ್ಯ ಶೈಕ್ಷಣಿಕ ಮೂಲಸೌಕರ್ಯ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದು, ಗ್ರಾಮೀಣ ಪ್ರದೇಶದ ಮಕ್ಕಳು ಶಿಕ್ಷಿತರಾಗಬೇಕು, ಸಮಾಜದ ಉನ್ನತ ಸ್ಥಾನವನ್ನು ಹೊಂದಿ ಪೋಷಕರ, ಗ್ರಾಮದ ಹೆಸರನ್ನು ಉಳಿಸುವುದರ ಜೊತೆಗೆ ಮೌಲ್ಯಯುತ ಬದುಕನ್ನು ಸಾಗಿಸಿ ಮತ್ತಷ್ಟು ಜನರ ಬದುಕನ್ನು ಹಸನುಗೊಳಿಸಬೇಕಿದೆ ಎಂದ ಅವರು, ಆಲದಹಳ್ಳಿ ಸರ್ಕಾರಿ ಪ್ರೌಢಶಾಲೆಯನ್ನು ತಾಲೂಕಿನಲ್ಲೇ ಮಾದರಿ ಶಾಲೆಯನ್ನಾಗಿ ರೂಪಿಸುವ ಕನಸು ನನ್ನದಾಗಿದೆ. ಕಣತೂರು ಗ್ರಾಪಂ ವ್ಯಾಪ್ತಿಯ ಶಾಲೆಗಳು ಶೈಕ್ಷಣಿಕವಾಗಿ ಜಿಲ್ಲೆಗೆ ಹೆಸರುವಾಸಿಯಾಗಬೇಕು, ಮಕ್ಕಳ ಶಿಕ್ಷಣಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ಒದಗಿಸಲು, ನೆರವನ್ನು ನೀಡಲು ನಾನು ಬದ್ಧನಾಗಿದ್ದೇನೆ ಎಂದರು.
ಈ ಸಂದರ್ಭದಲ್ಲಿ ಕಣತೂರು ಗ್ರಾಪಂ ವ್ಯಾಪ್ತಿಯ ಶಾಲೆಯ ಮಕ್ಕಳಿಗೆ ಹೈನುಗಾರಿಕೆಯ ಬಗ್ಗೆ ಅರಿವನ್ನು ಮೂಡಿಸಲಾಯಿತು. ವಿದ್ಯಾರ್ಥಿಗಳಿಗೆ ಚಿತ್ರ ಬಿಡಿಸುವ ಸ್ಪರ್ಧೆ ಏರ್ಪಡಿಸಿದ್ದು, ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ನಿರ್ದೇಶಕಿ ಆನಂದಜಲ, ಆಲದಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಶ್ರೀನಿವಾಸ್, ಮುದ್ದನಹಳ್ಳಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ಚಂದ್ರಶೇಖರ್, ಕೆ.ಮಾವಿನಹಳ್ಳಿ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕ ದಾಸಪ್ಪ, ಹುಲಿಕಲ್ ಪ್ರಾಥಮಿಕ ಶಾಲೆ ಮುಖ್ಯಶಿಕ್ಷಕಿ ಲಲಿತಾ, ಆಲದಹಳ್ಳಿ ಪ್ರೌಢಶಾಲೆಯ ಸಹ ಶಿಕ್ಷಕ ಮೋಹನ್ ಕುಮಾರ್ ಸೇರಿದಂತೆ ಶಿಕ್ಷಕರು, ವಿದ್ಯಾರ್ಥಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ: ಗಿರೀಶ್ ಕೆ ಭಟ್