ಬೆಂಗಳೂರು: ಹೆಣ್ಣು ಸಂಸಾರದ ಕಣ್ಣು ಎಂದು ಹೇಳುತ್ತಾರೆ. ತ್ಯಾಗಮಯಿ ಅವಳನ್ನು ಪ್ರಕೃತಿಗೆ, ನದಿಗೆ, ದೇವರಿಗೆ ಹೋಲಿಕೆ ಮಾಡುತ್ತಾರೆ. ಗಂಡಿನ ಪ್ರತಿ ಹಂತದಲ್ಲೂ, ಬದುಕಿನ ಏಳಿಗೆಯಲ್ಲಿ, ವಿವಿಧ ಹಂತಗಳಲ್ಲಿ ಹೆಣ್ಣು ಪೂರಕವಾಗಿ ನಿಲ್ಲುತ್ತಾಳೆ. ಈ ಕಾರಣದಿಂದ ಆಕೆಗೆ ನಲ್ಮೆಯ ಗೌರವ ಸೂಚಕವಾಗಿ ಮಾರ್ಚ್ 08ರಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಾಗಿ ಆಚರಿಸುತ್ತಾರೆ.
ಈ ಬಾರಿಯ ಆಚರಣೆ ಪ್ರಯುಕ್ತ ಬೆಂಗಳೂರಿನಲ್ಲಿ ಬೃಹತ್ ಕಾರ್ಯಕ್ರಮ ನಡೆಯಿತು. ಸುಮಾರು 1500 ಮಹಿಳೆಯರು ಪಾಲ್ಗೊಂಡಿದ್ದರು. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಹಿಳಾ ದಿನಾಚರಣೆ 2025 ಪ್ರಯುಕ್ತ ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಲು “ವುಮೆನ್ ವಾಕಥಾನ್’ ಆಯೋಜನೆ ಮಾಡಲಾಗಿತ್ತು.
ನಿರಂತರ ಕೆಲಸದಲ್ಲಿ ಮುಳುಗಿರುವ ಮಹಿಳೆಗೆ ತಮ್ಮ ಆರೋಗ್ಯ ಬಗ್ಗೆ ಕಾಳಜಿ ವಹಿಸುವ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಆಲ್ಟಿಯಸ್ ಆಸ್ಪತ್ರೆಯ ನೇತೃತ್ವದಲ್ಲಿ 3ನೇ ಆವೃತ್ತಿಯ “ವುಮೆನ್ ವಾಕಥಾನ್” ಶೀರ್ಷಿಕೆಯಲ್ಲಿ ವಾಕಥಾನ್ ಆಯೋಜನೆ ಮಾಡಲಾಗಿತ್ತು.
ಬೆಂಗಳೂರಿನ ಕಲ್ಯಾಣ ನಗರದ ಕೆಬಿಸಿ ಬ್ಯಾಸ್ಕೆಟ್ ಬಾಲ್ ಕೋರ್ಟ್ನಿಂದ ಬೆಳಗ್ಗೆ 6 ಗಂಟೆಗೆ ಪ್ರಾರಂಭಗೊಂಡ ವಾಕಥಾನ್ನನ್ನು ಆಲ್ಟಿಯಸ್ ಆಸ್ಪತ್ರೆಯ ಪ್ರಸೂತಿ ಮತ್ತು ಸ್ತ್ರೀರೋಗ ತಜ್ಞೆ ಡಾ. ಪ್ರಿಯಾ ಎಸ್. ಪಿ. ಪಾಟೀಲ್ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ತಜ್ಞರು, ಕುಟುಂಬ ನಿರ್ವಹಣೆಯ ಜವಾಬ್ದಾರಿ ನಿಭಾಯಿಸುವ ಭರದಲ್ಲಿ ತಮ್ಮ ಆರೋಗ್ಯದ ಬಗ್ಗೆಯೇ ಮಹಿಳೆಯರು ನಿರ್ಲಕ್ಷಿಸುತ್ತಿದ್ದಾರೆ.
ಶೇಕಡಾ 70 ರಷ್ಟು ಮಹಿಳೆಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಅನೇಕ ಅಧ್ಯಯನಗಳು ತಿಳಿಸಿವೆ. ಈ ಕಾರಣದಿಂದಲೇ ಮಹಿಳೆಯರು ಅನೇಕ ಆರೋಗ್ಯ ಸಮಸ್ಯೆಗೆ ಒಳಗಾಗುತ್ತಿದ್ದಾರೆ. ಮಹಿಳೆಯರೂ ಸಹ ಕುಟುಂಬ ನಿರ್ಹಣೆಯ ಜೊತೆ ಜೊತೆಗೆ ತಮ್ಮ ಆರೋಗ್ಯ ನಿಭಾಯಿಸಲು ಸಮಯ ಮೀಸಲಿಡಬೇಕು.
ನಿತ್ಯ ದೈಹಿಕ ವ್ಯಾಯಾಮ ಮಾಡುವುದು, ಪೌಷ್ಠಿಕಾಂಶಯುಕ್ತ ಆಹಾರ ಸೇವಿಸುವುದರ ಬಗ್ಗೆ ಗಮನವಹಿಸಬೇಕು ಎಂದರು. ತಮ್ಮ ಆರೋಗ್ಯ ನಿರ್ಲಕ್ಷಿಸುವ ಮಹಿಳೆಯರು ಎಂಡೋಮೆಟ್ರಿಯಾಸಿಸ್, ಸರ್ವೈಕಲ್ ಕ್ಯಾನ್ಸರ್ನಂತಹ ಮಾರಕ ಕಾಯಿಲೆಗೆ ಒಳಗಾಗುತ್ತಿದ್ದಾರೆ, ಈ ಅಪಾಯಕಾರ ಕ್ಯಾನ್ಸರ್ ಬಗ್ಗೆ ಮಹಿಳೆ ಜಾಗೃತಿ ಹೊಂದಬೇಕು. ಸರ್ವೈಕಲ್ ಕ್ಯಾನ್ಸರ್ ತಡೆಗಟ್ಟಲು ಇದೀಗ ಲಸಿಕೆ ಲಭ್ಯವಿದ್ದು, ಪ್ರತಿಯೊಬ್ಬರು ಇದರ ಪ್ರಯೋಜನ ಪಡೆದುಕೊಳ್ಳಲಿದೆ ಎಂದು ತಿಳಿಸಿದರು.
ಡೆಂಟಲ್ ಡೆನ್ ನಿರ್ದೇಶಕಿ ಹಾಗೂ ವಾಕಥಾನ್ನ ರೂವಾರಿ ಡಾ. ಲಕ್ಷ್ಮಿ ರೂಪೇಶ್ ಮಾತನಾಡಿ, ಮಹಿಳೆಯರ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರತಿವರ್ಷ ವಾಕಥಾನ್ ಆಯೋಜಿಸುತ್ತಾ ಬರಲಾಗಿದೆ. ಈ 3ನೇ ಆವೃತ್ತಿಯ ವುಮೆನ್ ವಾಕಥಾನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಇದಕ್ಕೆ ಇಲ್ಲಿ ಪಾಲ್ಗೊಂಡ ಸುಮಾರು 1500ಕ್ಕೂ ಹೆಚ್ಚು ಮಹಿಳೆಯರೇ ಸಾಕ್ಷಿ ಎಂದು ಹರ್ಷ ವ್ಯಕ್ತಪಡಿಸಿದರು.




