ಆನೇಕಲ್ : ಅಪ್ರಾಪ್ತ ವಿದ್ಯಾರ್ಥಿನಿಯೊಬ್ಬಳ ಮೇಲೆ ಬಾಲಕರಿಬ್ಬರು ಸೇರಿ ಲೈಂಗಿಕ ದೌರ್ಜನ್ಯ ಎಸಗಿರುವ ಆರೋಪ ಆನೇಕಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇಳಿ ಬಂದಿದೆ. ಕಳೆದ ಎರಡು ದಿನಗಳ ಹಿಂದೆ ಈ ಘಟನೆ ನಡೆದಿದೆ. ಶಾಲೆಯಲ್ಲಿ ಮಧ್ಯಾಹ್ನ ಊಟಕ್ಕೆ ಬಿಟ್ಟ ವೇಳೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದ್ದು, ಈ ಬಗ್ಗೆ ಆನೇಕಲ್ ಪೊಲೀಸ್ ಠಾಣೆಯಲ್ಲಿ ಪೋಕ್ಸೋ ಕಾಯ್ದೆಯಡಿ ದೂರು ದಾಖಲಾಗಿದೆ.
ಮಧ್ಯಾಹ್ನ ಊಟಕ್ಕೆಂದು ತೆರಳಿದ್ದ ವಿದ್ಯಾರ್ಥಿನಿ ನಾಪತ್ತೆಯಾಗಿದ್ದು, ಮರಳಿ ಶಾಲೆಗೆ ಬಂದಿರಲಿಲ್ಲ. ವಿದ್ಯಾರ್ಥಿನಿಯ ಗೈರುಹಾಜರಿ ಕಂಡ ಶಾಲಾ ಸಿಬ್ಬಂದಿ ಎಷ್ಟು ಹುಡುಕಿದರೂ ಸಿಕ್ಕಿರಲಿಲ್ಲ. ವಿಷಯ ತಿಳಿದು ಪೋಷಕರಾಧಿಯಾಗಿ ಹುಡುಕಿದರೂ ಸಂಜೆವರೆಗೂ ಪತ್ತೆಯಾಗಿರಲಿಲ್ಲ. ರಾತ್ರಿ ಮರಳಿ 7.30ಕ್ಕೆ ಮನೆಗೆ ಸುಟ್ಟ ಬಟ್ಟೆಯಲ್ಲಿ ಬಂದ ವಿದ್ಯಾರ್ಥಿನಿಯನ್ನು ವಿಚಾರಿಸಿದಾಗ ಘಟನೆ ಕುರಿತು ಬಾಯ್ಬಿಟ್ಟಿರುವುದಾಗಿ ಪೋಷಕರು ತಿಳಿಸಿದ್ದಾರೆ.
ಬಾಲಕಿಯನ್ನು ಕೂಲಂಕಷವಾಗಿ ವಿಚಾರಿಸಲಾಗಿದ್ದು, ಶಾಲೆಯಿಂದ ಹೊರ ಬಂದಾಗ ರಸ್ತೆಯಲ್ಲಿ ಪ್ರಜ್ಞೆ ತಪ್ಪಿತು, ನಂತರ ಕಣ್ಣು ಬಿಟ್ಟಾಗ ಸ್ನೇಹಿತೆಯ ಮನೆಯಲ್ಲಿದ್ದೆ. ಅಲ್ಲಿ ಇಬ್ಬರು ಬಾಲಕರು ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾಗಿ ತಮ್ಮ ಮಗಳು ಹೇಳಿಕೊಂಡಿರುವುದಾಗಿ ಪೋಷಕರು ವಿವರಿಸಿದ್ದಾರೆ.



