ಬೆಂಗಳೂರು: ನಂದಿನಿ ಹಾಲಿನ ದರವನ್ನು ಏರಿಕೆ ಮಾಡೇ ಮಾಡ್ತೀವಿ. ಆದರೇ ಎಷ್ಟು ಎನ್ನುವ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡ್ತೀವಿ ಅಂತ ಪಶು ಸಂಗೋಪನೆ ಸಚಿವ ವೆಂಕಟೇಶ್ ಮಾಹಿತಿ ನೀಡಿದ್ದಾರೆ.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದ ವೇಳೆಯಲ್ಲಿ ಬಿಜೆಪಿ ಎಂ.ಜಿ ಮೂಳೆ, ಕಾಂಗ್ರೆಸ್ ಪಕ್ಷದ ಉಮಾಶ್ರೀ ಕೇಳಿದಂತೆ ಪ್ರಶ್ನೆಗೆ ಉತ್ತರಿಸಿದ ಅವರು, ಹಾಲು ಉತ್ಪಾದಕರಿಗೆ 654.07 ಕೋಟಿ ರೂಪಾಯಿ ಪ್ರೋತ್ಸಾಹ ಧನ ಬಾಕಿ ಇದೆ.
9,04,547 ಫಲಾನುಭವಿಗಳಿಗೆ ಬಾಕಿ ಹಣ ಕೊಡಬೇಕಾಗಿದೆ. ಇದರಲ್ಲಿ ಸಾಮಾನ್ಯ ವರ್ಗದವರಿಗೆ 613.58 ಕೋಟಿ, ಎಸ್ಸಿಯವರಿಗೆ 18.29 ಕೋಟಿ, ಎಸ್ಟಿಯವರಿಗೆ 24.20 ಕೋಟಿ ರೂ ಬಾಕಿ ಇದೆ ಎಂಬುದಾಗಿ ತಿಳಿಸಿದರು.
ಬಾಕಿ ಹಣ ಬಿಡುಗಡೆಗಾಗಿ ಆರ್ಥಿಕ ಇಲಾಖೆಗೆ ಮನವಿ ಮಾಡಲಾಗಿದೆ. ಆರ್ಥಿಕ ಇಲಾಖೆ ಬಿಡುಗಡೆ ಮಾಡಿದ ಕೂಡಲೇ ಬಾಕಿ ಹಣವನ್ನು ಬಿಡುಗಡೆ ಮಾಡುವುದಾಗಿ ಹೇಳಿದರು.
ಹಾಲಿನ ಉತ್ಪಾದನೆ ಜಾಸ್ತಿ ಆಗಿದೆ. ಬಜೆಟ್ ಅಲೋಕೇಷನ್ ಅದರಂತೆ ಕೊಡ್ತಿಲ್ಲ. ಹೀಗಾಗಿ ಬಾಕಿ ಉಳಿದಿದೆ. ಸಿಎಂ ಸಿದ್ಧರಾಮಯ್ಯ ಅವರಿಗೂ ಬಾಕಿ ಹಣ ಬಿಡುಗಡೆಗೆ ಮನವಿ ಮಾಡಿದ್ದೇನೆ ಎಂದರು.
ಹಾಲಿನ ದರ ಏರಿಕೆಗೆ ರೈತರು ಬೇಡಿಕೆ ಇಟ್ಟಿದ್ದಾರೆ. 10 ರೂಪಾಯಿ ಜಾಸ್ತಿ ಮಾಡಬೇಕು ಅಂತ ಒತ್ತಾಯಿಸಿದ್ದಾರೆ. ಈ ಹಿನ್ನಲೆಯಲ್ಲಿ ಹಾಲಿನ ದರ ಏರಿಕೆ ಮಾಡೇ ಮಾಡ್ತೀವಿ. ಎಷ್ಟು ಅಂತ ಸಿಎಂ ಸಿದ್ಧರಾಮಯ್ಯ ಜೊತೆಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.




