Ad imageAd image

ಬಾಗಲಕೋಟ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯ ಅನುಧಾನ ನೀಡಿ: ಎಸ್.ಐ.ಓ ಇಳಕಲ್ ಆಗ್ರಹ.

Bharath Vaibhav
ಬಾಗಲಕೋಟ ಮೆಡಿಕಲ್ ಕಾಲೇಜು ಆರಂಭಕ್ಕೆ ಅಗತ್ಯ ಅನುಧಾನ ನೀಡಿ: ಎಸ್.ಐ.ಓ ಇಳಕಲ್ ಆಗ್ರಹ.
WhatsApp Group Join Now
Telegram Group Join Now

ಇಳಕಲ್: ಬಾಗಲಕೋಟೆ ಜಿಲ್ಲೆಗೆ ಜಿಲ್ಲೆಗೆ ಶೈಕ್ಷಣಿಕ ವಿಷಯದಲ್ಲಿ ನಿರಂತರ ತಾರತಮ್ಯ ಮಾಡಲಾಗುತ್ತಿದೆ, ಆಯಾ ರಾಜಕೀಯ ಪಕ್ಷಗಳು ಅಧಿಕಾರದಲ್ಲಿದ್ದಾಗ ಅನೇಕ ಬಾರಿ ಜಿಲ್ಲೆಗೆ ಸರ್ಕಾರಿ ಶೈಕ್ಷಣಿಕ ಸಂಸ್ಥೆಗಳನ್ನು ಸ್ಥಾಪಿಸುವ ಘೋಷಣೆಗಳನ್ನು ಮಾಡುತ್ತಾ ಬಂದಿದೆ, ಆದರೆ ಅವೆಲ್ಲವೂ ಕೇವಲ ಚುನಾವಣಾ ಪ್ರೇರಿತ ಆಶ್ವಾಸನೆಗಳಾಗಿದ್ದವು ಎಂಬುದು ದಶಕದ ರಾಜಕೀಯ ವಿದ್ಯಮಾನದಿಂದ ಸಾಬೀತಾಗುತ್ತಿದೆ, ಜಿಲ್ಲೆಯ ಜನಪ್ರತಿನಿಧಿಗಳ ದಿಟ್ಟ ಧ್ವನಿ ಹಾಗೂ ಒಗ್ಗಟ್ಟಿನ ಕೊರತೆಯಿಂದಾಗಿ ಜನತೆಯ ಬಹುದಿನಗಳ ಬೇಡಿಕೆಗಳು ನೆನೆಗುದಿಗೆ ಬಿದ್ದಿವೆ.

ಬಾಗಲಕೋಟೆಗೆ 2014-15ರ ಬಜೆಟ್ ನಲ್ಲಿ ಘೋಷಿಸಿದ್ದ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯಕ್ಕೆ ಸುಮಾರು 10 ವರ್ಷಗಳು ಕಳೆದರೂ ಇದುವರೆಗೂ ಯಾವುದೇ ರೀತಿಯ ಅನುದಾನ ಒದಗಿಸಿಲ್ಲ ಮತ್ತು ಮೆಡಿಕಲ್ ಕಾಲೇಜು ಸ್ಥಾಪನೆಗೆ ಜಮೀನಿನ ಖರೀದಿ ಹಾಗೂ ಕಟ್ಟಡಗಳ ನಿರ್ಮಾಣಕ್ಕೆ ಚಾಲನೆ ನೀಡಿಲ್ಲದಿರುವುದು ಕಾಲೇಜು ಸ್ಥಾಪನೆಯ ಕನಸಿಗೆ ತಿಲಾಂಜಲಿ ಇಟ್ಟಂತಿದೆ.

2014-15ರ ಬಜೆಟ್ ಅನ್ನು ಮಂಡಿಸಿದ್ದ ಅಂದಿನ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ಅದಕ್ಕಾಗಿ ಅನುದಾನ ನೀಡಲಿಲ್ಲ, 2018ರ ನಂತರ ಬಂದ ಸಮ್ಮಿಶ್ರ ಹಾಗೂ ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ಯಾವುದೇ ಬಿಡಿಗಾಸು ಬಿಡುಗಡೆ ಆಗದೆ ಘೋಷಿಣೆಯಾಗಿದೆ ಉಳಿದುಕೊಂಡಿದೆ.

ಇದೀಗ ಎರಡನೇ ಬಾರಿಗೆ ಸಿಎಂ ಆಗಿ 2025-26ರ ಬಜೆಟ್ ಮಂಡಿಸಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ರವರ ಮೇಲೆ ಈ ಭಾಗದ ಜನರ ಬಹಳಷ್ಟು ನಿರೀಕ್ಷೆ ಇದೆ. ಕಾರಣ, ಕಳೆದ ಬಾರಿಯ ಚುನಾವಣೆಯಲ್ಲಿ ತಮ್ಮ ರಾಜಕೀಯ ಬದುಕಿಗೆ ಪುನರ್ಜನ್ಮ ನೀಡಿದ್ದ ಬಾದಾಮಿ ವಿಧಾನ ಸಭಾ ಕ್ಷೇತ್ರವು ಬಾಗಲಕೋಟೆ ಜಿಲ್ಲೆಯಲ್ಲಿದ್ದು ಈ ಹಿಂದೆ ಬಾಗಲಕೋಟೆ ಜಿಲ್ಲೆಗೆ ತಾವೇ ಘೋಷಿಸಿದ್ದ ಸರ್ಕಾರಿ ವೈದ್ಯಕೀಯ ಕಾಲೇಜು ಆರಂಭಕ್ಕೆ ಈ ಬಾರಿಯ ಬಜೆಟ್ ನಲ್ಲಿ ಅನುದಾನ ಮೀಸಲಿಟ್ಟು ಜನತೆಯ ಋಣ ತೀರಿಸಬೇಕು ಎಂಬುದು ಜನತೆಯ ಆಶಯವಾಗಿದೆ.

2014-15ನೇ ಸಾಲಿನ ಬಜೆಟ್ ನಲ್ಲಿ ಜಿಲ್ಲೆಗೊಂದು ಮೆಡಿಕಲ್ ಕಾಲೇಜು ಸ್ಥಾಪಿಸಬೇಕೆಂಬ ಯೋಜನೆಯ ಭಾಗವಾಗಿ ಬಾಗಲಕೋಟೆ ಜೊತೆಗೆ ಗದಗ, ಹಾವೇರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿ ವೈದ್ಯಕೀಯ ಕಾಲೇಜು ಆರಂಭಿಸುವುದಾಗಿ ಘೋಷಣೆ ಮಾಡಲಾಗಿತ್ತು, ಘೋಷಣೆಯಾದ ಪೈಕಿ ಕೊಪ್ಪಳ, ಹಾವೇರಿ ಜೊತೆಗೆ ಬಹುತೇಕ ಜಿಲ್ಲೆಗಳಲ್ಲಿ ಆರಂಭಗೊಂಡಿವೆ, ಆದರೆ ಬಾಗಲಕೋಟೆಗೆ ಮಾತ್ರ ಇನ್ನೂ ಸರ್ಕಾರ ಇಚ್ಛಾಶಕ್ತಿ ತೋರುತ್ತಿಲ್ಲ ಎನ್ನುವುದು ಶೋಚನೀಯ.

ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವೈದ್ಯಕೀಯ ಶಿಕ್ಷಣ ಎನ್ನುವುದು ಒಂದು ಕನಸಾಗಿರುವ ಈ ಕಾಲಘಟ್ಟದಲ್ಲಿ ಎಲ್ಲರಿಗೂ ಸುಲಭ ಮತ್ತು ಕೈಗೆಟುಕುವ ರೀತಿಯಲ್ಲಿ ಶಿಕ್ಷಣ ಲಭ್ಯವಾಗಲು ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ತೀರಾ ಅವಶ್ಯಕತೆ ಇದೆ, ಇದರೊಂದಿಗೆ ಜಿಲ್ಲೆಯ ಬಡ ಜನರಿಗೆ ಉಚಿತ ಮತ್ತು ಗುಣಮಟ್ಟದ ಆರೋಗ್ಯ ತಪಾಸಣೆಯೂ ಸಿಗಲಿದ್ದು, ಈ ನಿಟ್ಟಿನಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯು ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ. ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸುಸಜ್ಜಿತ ಆಸ್ಪತ್ರೆಗಾಗಿ ಈ ಭಾಗದ ವಿದ್ಯಾರ್ಥಿ ಮತ್ತು ಜನತೆ ಬಹಳಷ್ಟು ಆಕಾಂಕ್ಷೆಯನ್ನು ಇಟ್ಟುಕೊಂಡಿದ್ದಾರೆ, ಆದರೆ ಘೋಷಣೆಯಾದ ಮೆಡಿಕಲ್ ಕಾಲೇಜು ಕಾರ್ಯಾರಂಭಕ್ಕೆ ಸೂಕ್ತ ಕ್ರಮ ಕೈಗೊಳ್ಳದೆ ಘೋಷಣೆಯಾಗಿಯೇ ಉಳಿದಿದೆ. ಈ ನಿಟ್ಟಿನಲ್ಲಿ ಸರ್ಕಾರ ಈ ಭಾಗದ ಜನತೆಯ ಅಗತ್ಯತೆಯನ್ನು ಮನಗಂಡು ಜನರ ಬೇಡಿಕೆಗಳನ್ನು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡಬೇಕಾಗಿದೆ.

ಕರ್ನಾಟಕ ರಾಜ್ಯದ 22 ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗಿದೆ. ದಕ್ಷಿಣ ಕನ್ನಡ, ಉಡುಪಿ, ದಾವಣಗೆರೆ, ಕೋಲಾರ, ಬಾಗಲಕೋಟೆ, ವಿಜಯಪುರ, ರಾಮನಗರ, ತುಮಕೂರು, ಬೆಂಗಳೂರು ಗ್ರಾಮಾಂತರ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜುಗಳು ಇನ್ನೂ ಸ್ಥಾಪನೆಯಾಗಿಲ್ಲ.

ಖಾಸಗಿ ಮೆಡಿಕಲ್ ಮಾಫಿಯಾ ಹಾಗೂ ರಾಜಕಾರಣಿಗಳ ಹಸ್ತಕ್ಷೇಪದಿಂದ ಜಿಲ್ಲೆಗೆ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪನೆಯಾಗದಂತೆ ತಡೆಯುತ್ತಿದೆ ಎನ್ನುವುದು ಬಾಗಲಕೋಟೆಯ ಜನಸಾಮಾನ್ಯರ ಆರೋಪವಾಗಿದ್ದು ಇದು ಸಾರ್ವಜನಿಕರ ಹಿತಾಸಕ್ತಿಗೆ ವಿರುದ್ಧವಾದ ನಡೆಯಾಗಿದೆ.

ಅನೇಕ ವರ್ಷಗಳಿಂದ ಶೈಕ್ಷಣಿಕ ವಿಷಯದಲ್ಲಿ ಅನ್ಯಾಯಕ್ಕೆ ಒಳಗಾಗುತ್ತಿರುವ ಬಾಗಲಕೋಟೆ ಜಿಲ್ಲೆಗೆ ಶೈಕ್ಷಣಿಕ ಸಂಸ್ಥೆಗಳ ಅಗತ್ಯತೆಯ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಸರ್ಕಾರ ಮಟ್ಟದಲ್ಲಿ ಧ್ವನಿಯೆತ್ತಬೇಕು, ಜನರ ಬೇಡಿಕೆಯಂತೆ ರಾಜ್ಯದ ಹೊಸ 9 ವಿಶ್ವವಿದ್ಯಾಲಯಗಳನ್ನು ಸ್ಥಗಿತಗೊಳಿಸುವ ಭಾಗವಾಗಿ ಜಮಖಂಡಿಯ ಬಾಗಲಕೋಟೆಯ ವಿಶ್ವವಿದ್ಯಾಲಯವನ್ನು ಮುಚ್ಚುವ ಪ್ರಸ್ತಾಪವಿದ್ದು, ಸರ್ಕಾರ ಈ ನಿರ್ಧಾರವನ್ನು ಹಿಂಪಡೆದು ವಿವಿಯನ್ನು ಮುಂದುವರೆಸಿಕೊಂಡು ಹೋಗಲು ಹಾಗೂ ನೆನೆಗುದಿಗೆ ಬಿದ್ದಿರುವ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯದ ಸ್ಥಾಪನೆಗೆ ಅಗತ್ಯ ಅನುದಾನ ಮತ್ತು ಕಾರ್ಯಯೋಜನೆಯನ್ನು ರೂಪಿಸಲು ರಾಜ್ಯ ಸರ್ಕಾರವು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕು ಎಂದು ಎಸ್.ಐ.ಓ ಇಳಕಲ್ ಘಟಕವು ಆಗ್ರಹಿಸುತ್ತದೆ.

ಈ ಸಂದರ್ಭದಲ್ಲಿ ಎಸ್.ಐ.ಓ ಬಾಗಲಕೋಟೆ ಜಿಲ್ಲಾಧ್ಯಕ್ಷ ಮಹಮ್ಮದ್ ಪೀರ್ ಲಟಗೇರಿ, ಸ್ಥಾನೀಯ ಅಧ್ಯಕ್ಷರಾದ ಆಸಿಫ್ ಹುಣಚಗಿ ಹಾಗೂ ಕಾರ್ಯದರ್ಶಿ ಉಸ್ಮಾನ್ ಗನಿ ಶಿವನಗುತ್ತಿ ಮತ್ತು ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.

ವರದಿ : ದಾವಲ್ ಶೇಡಂ

WhatsApp Group Join Now
Telegram Group Join Now
- Advertisement -  - Advertisement - 
Share This Article
error: Content is protected !!