ಸಿರುಗುಪ್ಪ : ತಾಲೂಕಿನ ಗಡಿ ಭಾಗದಲ್ಲಿರುವ ಸೀಮಾಂದ್ರ ಪ್ರದೇಶದ ಗೂಳ್ಯಂ ಗ್ರಾಮದಲ್ಲಿ ಶ್ರೀ ಶರಣ ಗಾದಿಲಿಂಗಪ್ಪ ತಾತ ಹಾಗೂ ಶ್ರೀ ಸಿದ್ದೇಶ್ವರರ ಜೋಡು ರಥೋತ್ಸವವು ಮಂಗಳವಾರದಂದು ಸಂಭ್ರಮ ಸಡಗರದಿಂದ ಜರುಗಿತು.
ರಥೋತ್ಸವ ನಿಮಿತ್ತ ದೇವಸ್ಥಾನದಲ್ಲಿ ಪಂಚಾಮೃತಾಭಿಷೇಕ, ವಿವಿಧ ಫಲಪುಷ್ಪಗಳ ಅಲಂಕಾರ, ಪಲ್ಲಕ್ಕಿ ಸೇವೆಯಂತಹ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಜರುಗಿದ್ದು, ಸಾಯಂಕಾಲ ಜರುಗಿದ ರಥೋತ್ಸವದಲ್ಲಿ ಸಹಸ್ರಾರು ಭಕ್ತರು ಹೂಹಣ್ಣು ಎಸೆದು ಭಕ್ತಿಯಿಂದ ನಮಿಸಿದರು.
ನೂರಾರು ವರ್ಷಗಳ ಇತಿಹಾಸವಿರುವ ಶ್ರೀ ಗಾದಿಲಿಂಗಪ್ಪ ತಾತನವರು ನಮ್ಮ ಕರ್ನಾಟಕದ ಗಂಗಾವತಿ ತಾಲೂಕಿನ ಮರಳಿ ಹೊಸಗೇರಿ ಗ್ರಾಮವೆಂದು ಹೇಳಲಾಗುತ್ತಿದೆ.
ಸಿಂಧನೂರು ತಾಲೂಕಿನ ಅಂಬಾದೇವಿ, ಸಿರುಗುಪ್ಪ ತಾಲೂಕಿನ ಶ್ರೀ ಬನ್ನಿ ಮಹಾಂಕಾಳಿ ದೇವಿಯರನ್ನು ಆರಾಧಿಸಿ ಸಿದ್ದಿಯನ್ನು ಪಡೆದಿದ್ದರೆಂಬ ಪ್ರತೀತಿಯಿದೆ.
ಕುರಿಗಳನ್ನು ಕಾಯುತ್ತಲೇ ಹಲವಾರು ಲೀಲೆಗಳು, ಪವಾಡಗಳನ್ನು ಮಾಡುತ್ತಾ ಗೂಳ್ಯಂ ಗ್ರಾಮದಲ್ಲಿ ಇಹಲೋಕವನ್ನು ತ್ಯಜಿಸಿದ ಮಹಾತ್ಮ ಇಂದಿಗೂ ಭಕ್ತರ ಸಂಕಷ್ಟಗಳನ್ನು ನಿವಾರಿಸುತ್ತಿದ್ದಾರೆಂಬ ನಂಬಿಕೆಯಿದೆ.

ಇಂದಿಗೂ ಬಳ್ಳಾರಿ ಜಿಲ್ಲೆ ಮಾತ್ರವಲ್ಲದೇ ನೆರೆಯ ಜಿಲ್ಲೆಗಳಾದ ಕೊಪ್ಪಳ, ಗದಗ, ರಾಯಚೂರು ಹಾಗೂ ಆಂದ್ರಪ್ರದೇಶದ ಕರ್ನೂಲ್, ಕಡಪ, ಅನಂತಪುರ ಜಿಲ್ಲೆಯಲ್ಲೂ ಅಪಾರ ಭಕ್ತರ ಬಳಗವನ್ನು ಹೊಂದಿದ್ದಾರೆ.
ಪ್ರತಿವರ್ಷ ಶಿವರಾತ್ರಿ ಅಮವಾಸ್ಯೆ ಸೇರಿದಂತೆ ಐದು ದಿನದಲ್ಲಿ ಜೋಡು ರಥೋತ್ಸವವು ಅದ್ದೂರಿಯಾಗಿ ಜರುಗುತ್ತಿದ್ದು, ಸಿರುಗುಪ್ಪ ತಾಲೂಕಿನಿಂದ ತೆರಳುವ ಭಕ್ತರಿಗೆಂದು ದರೂರು, ಹಾಗಲೂರು, ಹೊಸಳ್ಳಿ, ತಾಳೂರು, ಊಳೂರು, ಉತ್ತನೂರು ಗ್ರಾಮಗಳಲ್ಲಿ ದಾರಿಯುದ್ದಕ್ಕೂ ಮಜ್ಜಿಗೆ, ಹಣ್ಣಿನ ರಸ, ನೀರು, ಅನ್ನದಾಸೋಹದ ವ್ಯವಸ್ಥೆ ಮಾಡಲಾಗಿತ್ತು.
ಇಲ್ಲಿನ ರೈತರಿಗಂತೂ ಇದೊಂದು ಜನಪದ ಹಬ್ಬದಂತಾಗಿದ್ದು, ಎತ್ತುಗಳ ಸಾಮರ್ಥ್ಯ ಪ್ರದರ್ಶನ, ಮಾರಾಟ, ಹಾಗೂ ಕೃಷಿ ಉಪಕರಣಗಳಿಗೆ ಸಂಬಂದಿಸಿದ ಪರಿಕರಗಳನ್ನು ಖರೀದಿಸಬಹುದಾಗಿದೆ.
ವರದಿ : ಶ್ರೀನಿವಾಸ ನಾಯ್ಕ




