ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿರುವ 16 ನೇ ಬಜೆಟ್ ನಲ್ಲಿ ಅಲ್ಪ ಸಂಖ್ಯಾತರ ಹೆಸರಿನಲ್ಲಿ ಮುಸ್ಲಿಮರಿಗೆ ಪರವಾಗಿ ಬಜೆಟ್ ಮಂಡನೆ ಮಾಡಲಾಗಿದೆ ಎಂದು ಬಿಜೆಪಿ ಕಿಡಿಕಾರಿದೆ.
ಈ ಬಗ್ಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯ ಕರ್ನಾಟಕದಲ್ಲಿ ಹಲಾಲ್ ಬಜೆಟ್ ಮಂಡಿಸಲಾಗಿದೆ.
ಸರ್ಕಾರಿ ಕಾಮಗಾರಿಗಳಲ್ಲಿ 2 ಕೋಟಿ ರೂ.ವರೆಗಿನ ಗುತ್ತಿಗೆ ಮತ್ತು 1 ಕೋಟಿ ರೂ.ವರೆಗಿನ ಖರೀದಿಯಲ್ಲಿ ಮುಸ್ಲಿಂ ಮೀಸಲಾತಿ ಕಲ್ಪಿಸುವುದಾಗಿ ರಾಜ್ಯ ಸರ್ಕಾರ ಬಜೆಟ್ ನಲ್ಲಿ ಘೋಷಿಸಿದೆ ಎಂದು ಆಕ್ರೋಶ ಹೊರಹಾಕಿದೆ.
ಸರ್ಕಾರಿ ಒಪ್ಪಂದಗಳಲ್ಲಿ ಮುಸ್ಲಿಮರಿಗೆ ಮೀಸಲಾತಿ, ಮುಸ್ಲಿಂ ಸರಳ ವಿವಾಹಗಳಿಗೆ 50,000 ರೂ. ನೆರವನ್ನು ನೀಡಲಾಗಿದೆ ಎಂದು ಆರೋಪಿಸಿದೆ.
ಅಷ್ಟೇ ಅಲ್ಲದೆ ವಕ್ಫ್ ಆಸ್ತಿಗಳು ಮತ್ತು ಸ್ಮಶಾನಗಳ ಮೂಲಸೌಕರ್ಯ ಅಭಿವೃದ್ಧಿಗೆ 150 ಕೋಟಿ ರೂ. ಹಾಗೂ ಮುಸ್ಲಿಂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ 50 ಲಕ್ಷ ರೂ. ಘೋಷಿಸಿದೆ ಎಂದು ಬಿಜೆಪಿ ಬರೆದುಕೊಂಡಿದೆ.
ಇಷ್ಟು ದಿನ ಮುಸ್ಲಿಮರಿಗೆ ತೆರೆಮರೆಯಲ್ಲಿ ವಿಶೇಷ ಆದ್ಯತೆ ನೀಡುತ್ತಿದ್ದ ಸಿದ್ದರಾಮಯ್ಯ ಅವರು ಇದೀಗ ಉಳ್ಳಾಲ ಪಟ್ಟಣದ ಮುಸ್ಲಿಂ ಹುಡುಗಿಯರಿಗೆ ಮುಸ್ಲಿಂ ಪ್ರಾಬಲ್ಯದ ಪ್ರದೇಶಗಳಲ್ಲಿ ಹೊಸ ಐಟಿಐ ಕಾಲೇಜು ಸ್ಥಾಪನೆ ಅನುದಾನ ನೀಡಿದೆ. ಹಾಗೆ ಕೆಇಎ ವಸತಿ ಪಿಯು ಕಾಲೇಜು ಅಡಿಯಲ್ಲಿ ಮುಸ್ಲಿಂ ವಿದ್ಯಾರ್ಥಿಗಳಿಗೆ ಶೇ. 50 ಶುಲ್ಕ ರಿಯಾಯಿತಿ ನೀಡಿದೆ ಎಂದು ಬಿಜೆಪಿ ಗುಡುಗಿದೆ.
ಮುಸ್ಲಿಂ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಮತ್ತು ವಿದೇಶಿ ವಿದ್ಯಾರ್ಥಿವೇತನದಲ್ಲಿ ಹೆಚ್ಚಳ ಹೆಚ್ಚುವರಿ ಕಟ್ಟಡಗಳೊಂದಿಗೆ ಬೆಂಗಳೂರಿನ ಹಜ್ ಭವನದ ವಿಸ್ತರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.
ಅಷ್ಟೇ ಅಲ್ಲದೆ ಮುಸ್ಲಿಂ ಹುಡುಗಿಯರಿಗೆ ಸ್ವರಕ್ಷಣೆ ತರಬೇತಿ ನೀಡಲಾಗಿದೆ. ಆದರೆ ಇತ್ತ ಎಸ್‌ಸಿ, ಎಸ್‌ಟಿ ಮತ್ತು ಒಬಿಸಿಗಳಿಗೆ ಯಾವ ಅನುದಾನವೂ ಇಲ್ಲ ಏನು ಇಲ್ಲ ಎಂದು ಆಕ್ರೋಶ ಹೊರಹಾಕಿದೆ.




