ನವದೆಹಲಿ: ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನೆಲೆ ಮುಖ್ಯಮಂತ್ರಿ ರೇಖಾ ಗುಪ್ತಾ ನೇತೃತ್ವದ ಬಿಜೆಪಿ ಸರ್ಕಾರ ಮಹಿಳೆಯರಿಗೆ ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ಸಚಿವ ಆಶಿಶ್ ಸೂದ್ ಅವರ ಪ್ರಕಾರ, ಶನಿವಾರ ದೆಹಲಿ ಸಚಿವಾಲಯದಲ್ಲಿ ಸಚಿವ ಸಂಪುಟ ಸಭೆ ಕರೆಯಲಾಗಿದೆ. ಇದರಲ್ಲಿ ಮಹಿಳೆಯರಿಗೆ ಮಾಸಿಕ 2,500 ಆರ್ಥಿಕ ನೆರವು ನೀಡುವ ಯೋಜನೆಗೆ ಔಪಚಾರಿಕ ಅನುಮೋದನೆ ನೀಡುವ ಸಾಧ್ಯತೆ ಇದೆ.
ವಿಧಾನಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ ಬಿಜೆಪಿ ಬಿಡುಗಡೆ ಮಾಡಿದ್ದ ಪ್ರಣಾಳಿಕೆಯಲ್ಲಿ ದೆಹಲಿಯಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ಪ್ರತಿ ತಿಂಗಳು 2,500 ರೂ. ಆರ್ಥಿಕ ನೆರವು ನೀಡಲಾಗುವುದು ಎಂದು ಘೋಷಿಸಲಾಗಿತ್ತು.
ಇದೀಗ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯ ಹಿನ್ನೆಲೆ ಶನಿವಾರ ಮಧ್ಯಾಹ್ನ 12 ಗಂಟೆಗೆ ದೆಹಲಿಯ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ರಾಜ್ಯ ಬಿಜೆಪಿ ಮಹಿಳಾ ಮೋರ್ಚಾದಿಂದ ದೊಡ್ಡ ಕಾರ್ಯಕ್ರಮ ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಈ ವೇಳೆ, ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ಕ್ಯಾಬಿನೆಟ್ನ ಎಲ್ಲಾ ಸಚಿವರು ಉಪಸ್ಥಿತರಿರಲಿದ್ದಾರೆ. ಬಿಜೆಪಿ ರಾಷ್ಟ್ರೀಯ ಮಹಿಳಾ ಮೋರ್ಚಾದ ಅಧ್ಯಕ್ಷೆ ವನತಿ ಶ್ರೀನಿವಾಸನ್ ಕೂಡ ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಇಲ್ಲಿ ಕೆಲವು ಮಹಿಳೆಯರ ಹೆಸರನ್ನು ಸಾಂಕೇತಿಕವಾಗಿ ನೋಂದಾಯಿಸುವ ಮೂಲಕ ಮಹಿಳಾ ಸಮೃದ್ಧಿ ಯೋಜನೆಯನ್ನು ಜಾರಿಗೊಳಿಸಲಾಗುತ್ತದೆ.
ಯೋಜನೆಗೆ ವಿಧಿಸಲಾದ ಷರತ್ತುಗಳು: ಈ ಯೋಜನೆಯನ್ನು ಜಾರಿಗೆ ತರಲು ದೆಹಲಿ ಸರ್ಕಾರ ಕೆಲವು ಷರತ್ತುಗಳನ್ನು ವಿಧಿಸಲಿದೆ. 18 ರಿಂದ 60 ವರ್ಷದೊಳಗಿನ ಮಹಿಳೆಯರು ಮಾತ್ರ ಈ ಯೋಜನೆಯ ಲಾಭ ಪಡೆಯುತ್ತಾರೆ. ಅರ್ಹ ಮಹಿಳೆಯರು ಮತದಾರರ ಚೀಟಿ, ಬಿಪಿಎಲ್ ಕಾರ್ಡ್, ಆಧಾರ್ ಕಾರ್ಡ್ ಮತ್ತು ಆದಾಯ ಪ್ರಮಾಣಪತ್ರ ಹೊಂದಿರಬೇಕು. ವಾರ್ಷಿಕವಾಗಿ 3 ಲಕ್ಷ ಅಥವಾ ಅದಕ್ಕಿಂತ ಕಡಿಮೆ ಆದಾಯ ಇರುವ ಮಹಿಳೆಯರು ಮಾತ್ರ ಈ ಯೋಜನೆಯಡಿ ಹೆಸರು ನೋಂದಾಯಿಸಿಕೊಳ್ಳಲು ಸಾಧ್ಯವಾಗುತ್ತದೆ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಾಹಿತಿಯ ಪ್ರಕಾರ, ಯೋಜನೆ ಲಾಭ ಪಡೆಯಲು ಅರ್ಹ ಮಹಿಳೆಯರ ಸಂಖ್ಯೆ ಸುಮಾರು 15 ಲಕ್ಷ ಇದೆ. ಈ ಯೋಜನೆಗೆ ಸಚಿವ ಸಂಪುಟ ಅನುಮೋದನೆ ನೀಡಿದ ನಂತರ, ಫಲಾನುಭವಿಗಳು ಆರ್ಥಿಕ ನೆರವಿನ ಪ್ರಯೋಜನ ಪಡೆಯಲು ವೆಬ್ಪೋರ್ಟಲ್ ಅನ್ನು ಸಹ ರಚಿಸಲಾಗುತ್ತದೆ.
ಇದರಲ್ಲಿ ಅರ್ಹ ಮಹಿಳೆಯರು ಅರ್ಜಿ ಸಲ್ಲಿಸಬಹುದು. ಇದರ ಮೂಲಕ ಅರ್ಜಿ ಸಲ್ಲಿಸುವ ಮಹಿಳೆಯರ ದಾಖಲೆಗಳನ್ನು ಗೌಪ್ಯವಾಗಿಡಲಾಗುವುದು ಮತ್ತು ಪರಿಶೀಲನೆಯ ನಂತರ, ಅರ್ಹ ಮಹಿಳೆಯರ ಆಧಾರ್ ಕಾರ್ಡ್ಗೆ ಲಿಂಕ್ ಮಾಡಲಾದ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 2,500 ರೂ. ಜಮೆ ಮಾಡಲಾಗುತ್ತದೆ.



