ಮೊಮ್ಮಗಳು, ಮಗಳು, ಗೆಳತಿ, ಹೆಂಡತಿ, ತಾಯಿ, ಅತ್ತೆ, ಅಜ್ಜಿ, ಚಿಕ್ಕಮ್ಮ, ದೊಡ್ಡಮ್ಮ, ಅಕ್ಕ, ತಂಗಿ ಹೀಗೆ ತನ್ನ ಜೀವಿತಾವಧಿಯಲ್ಲಿ ಎಲ್ಲ ರೀತಿಯ ಪಾತ್ರವನ್ನು ಚ್ಯುತಿ ಬಾರದಂತೆ ನಿಭಾಯಿಸಿಕೊಂಡು ಹೋಗುವ, ಅಳುವ ಮಗುವಿಗೆ ಹಾಲುಣಿಸಿ ಬೆಚ್ಚಗೆ ಮಲಗಿಸುವ, ಹಸಿದ ಜೀವಕ್ಕೆ ಅನ್ನವಿಟ್ಟು ಅನ್ನಪೂರ್ಣೆಯಾಗುವ, ನೋವಿಗೆ ಮಿಡಿಯುವ, ಸೇವಕಿಯಾಗಿ ಸಂಸಾರವನ್ನು ನಿಭಾಯಿಸುವ, ಸಮಾಜವನ್ನು ಮುನ್ನಡೆಸುವ ಹೀಗೆ ಹತ್ತಾರು ಕಾರ್ಯಗಳಲ್ಲಿ ವರ್ಷಪೂರ್ತಿ ತನ್ನನ್ನು ತೊಡಗಿಸಿಕೊಳ್ಳುತ್ತಾ ಮುನ್ನಡೆಯುವ ಮಹಿಳೆಯರಿಗೆ ಒಂದು ದಿನ ಸಾಕಾ? ಮಹಿಳಾ ದಿನಾಚರಣೆ ವೇಳೆ ತಳಮಟ್ಟದಿಂದ ಮೇಲ್ಮಟ್ಟದವರೆಗೆ ಒಂದಲ್ಲ ಒಂದು ರೀತಿಯಲ್ಲಿ ಕೆಲಸ ಮಾಡುತ್ತಾ ಕುಟುಂಬಕ್ಕೆ ಮತ್ತು ಸಮಾಜಕ್ಕೆ ಕೊಡುಗೆಯಾಗಿರುವ ಮಹಿಳೆಯರನ್ನು ಸ್ಮರಿಸುತ್ತಾ ಮುನ್ನಡೆಯುವುದು ಎಲ್ಲರ ಕರ್ತವ್ಯವಾಗಿದೆ.
ಈ ಸಂದರ್ಭದಲ್ಲಿ ಮಹಿಳೆಯರ ಕಾರ್ಯವನ್ನು ಸ್ಮರಿಸುವಾಗ ಜಿ.ಎಸ್.ಶಿವರುದ್ರಪ್ಪರವರ ಕವನದ ಸಾಲು ‘ನಿನಗೆ ಬೇರೆ ಹೆಸರು ಬೇಕೇ? ಸ್ತ್ರೀ ಎಂದರೆ ಅಷ್ಟೇ ಸಾಕೇ….? ಸದ್ದಿಲ್ಲದೆ ಹಾದು ಹೋಗುತ್ತದೆ. ತನ್ನೆಲ್ಲ ನೋವುಗಳಾಚೆಗೆ ಮನೆ ಮತ್ತು ಮನೆಯ ಹೊರಗೆ ದುಡಿಯುತ್ತಾ ಕುಟುಂಬಕ್ಕೆ ಆಸರೆಯಾಗುತ್ತಿರುವ ಅವಳಿಗೊಂದು ಸದಾ ನಮನವಿರಲಿ.
ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಗೆ ಸಿಎಂ ಸಿದ್ದರಾಮಯ್ಯ ಶುಭ ಕೋರಿದ್ದು ಹೀಗೆ” ಮನೆಯ ಸಂಪೂರ್ಣ ಜವಬ್ದಾರಿಯೊಂದಿಗೆ ಮನೆಯಾಚೆಗೂ ದುಡಿದು ಕುಟುಂಬ ನಿರ್ವಹಣೆಯಲ್ಲಿ ತನ್ನದೇ ಪಾತ್ರವಹಿಸುತ್ತಿರುವ ಮಹಿಳಾ ಉದ್ಯೋಗಿಗಳ ಬದುಕು ಒಂಥರಾ ಸವಾಲಿನದ್ದಾಗಿದೆ ಎನ್ನುವುದರಲ್ಲಿ ಎರಡು ಮಾತಿಲ್ಲ. ಒಂದೆಡೆ ಮನೆ, ಮತ್ತೊಂದೆಡ ಕೆಲಸ ಇದೆರಡರ ಒತ್ತಡದಲ್ಲಿ ಕಳೆದು ಹೋಗುವ ಮಹಿಳೆಯರು ಸ್ವಲ್ಪ ನಿರ್ಲಕ್ಷ್ಯ ವಹಿಸಿದರೂ ತಮ್ಮ ಮತ್ತು ಕುಟುಂಬದ ಸ್ವಾಸ್ಥ್ಯವೇ ಕಳೆದು ಹೋಗಿ ಬಿಡುತ್ತದೆ. ಹೀಗಾಗಿ ಎರಡು ಕಡೆಯೂ ಸರಿದೂಗಿಸಿಕೊಂಡು ಹೋಗುತ್ತಿರುವ ಕೋಟ್ಯಂತರ ಮಹಿಳೆಯರ ಬದುಕು ಬೆಚ್ಚಗಿರಲೆಂದು ಆಶಿಸೋಣ. ಮಹಿಳಾ ಉದ್ಯೋಗಿಗಳ ಬದುಕೇ ವಿಭಿನ್ನ ಇವತ್ತು ತಳಮಟ್ಟದ ಕೆಲಸಗಳಿಂದ ಆರಂಭವಾಗಿ ಮೇಲ್ಮಟ್ಟದವರೆಗೆ ಎಲ್ಲ ಕಡೆಗಳಲ್ಲಿ ಮಹಿಳೆಯರು ಕಾರ್ಯನಿರ್ವಹಿಸುತ್ತಿದ್ದು, ಅವರಿಲ್ಲದೆ ಸಂಸಾರದ ರಥವೂ ಸಾಗಲ್ಲ ಅತ್ತ ದೇಶವೂ ಮುನ್ನಡೆಯಲ್ಲ. ಮುಂಜಾನೆ ಎದ್ದು ಗಂಡ, ಮಕ್ಕಳು ಸೇರಿದಂತೆ ಇಡೀ ಕುಟುಂಬಕ್ಕೆ ಅಡುಗೆ ಮಾಡಿ ಬಡಿಸಿ ಮಕ್ಕಳನ್ನು ಶಾಲೆಗೆ, ಗಂಡನನ್ನು ಆಫೀಸಿಗೆ ಕಳುಹಿಸಿ ತಾನು ಒಂದಿಷ್ಟು ತಿಂದು ಮತ್ತೊಂದಷ್ಟನ್ನು ಡಬ್ಬಿಗೆ ತುಂಬಿಸಿಕೊಂಡು ಲಗುಬಗೆಯಿಂದ ಹೊರಟು ತನ್ನ ಕೆಲಸ ಕಡೆಗೆ ಓಡುವ ಮಹಿಳೆಯರ ಧಾವಂತ ನೋಡುವವರಿಗೆ ಅರ್ಥವಾಗುವುದೇ ಇಲ್ಲ.
ರಾತ್ರಿ ಏನು ಅಡುಗೆ ಮಾಡುವುದು? ನಾಳೆ ಬೆಳಿಗ್ಗೆ ಯಾವ ತಿಂಡಿ ಮಾಡಿದರೆ ಸುಲಭವಾಗುತ್ತದೆ. ಆಫೀಸಿನಲ್ಲಿ ಬಾಕಿ ಉಳಿದ ಕೆಲಸವನ್ನು ಹೇಗೆ ಮುಗಿಸೋದು? ರಜೆ ಸಿಕ್ಕರೆ ಏನು ಕೆಲಸ ಮಾಡೋದು? ಹೀಗೆ ಸಣ್ಣ ಪುಟ್ಟ ಆಲೋಚನೆಗಳಿಂದ ದೊಡ್ಡ, ದೊಡ್ಡ ಯೋಜನೆಗಳ ತನಕ ಸದಾ ತಲೆಯಲ್ಲಿಟ್ಟು ಕೊಂಡು ಕೆಲಸ ಮತ್ತು ಸಮಯದ ಜತೆ ಓಡುವ ಮಹಿಳಾ ಉದ್ಯೋಗಿಗಳ ಬದುಕು ಒಂಥರಾ ವಿಭಿನ್ನವಾಗಿರುತ್ತದೆ. ಒಂದು ದಿನದ ಕೆಲಸವಲ್ಲ ನಿತ್ಯದ ಬದುಕು ನೋಡುವವರಿಗೆ ಅವಳಿಗೇನಪ್ಪಾ ದುಡಿತಾಳೆ ಸಂಬಳ ಬರುತ್ತದೆ. ಹೊಸ ಬಟ್ಟೆ, ಚಿನ್ನ, ಒಡವೆ ಮಾಡಿಸಿಕೊಂಡು ಅವಳಿಗೆ ಹೇಗೆ ಬೇಕೋ ಹಾಗೆ ಬದುಕುತ್ತಿದ್ದಾಳೆ ಇದ್ದರೆ ಅವಳ ರೀತಿ ಇರಬೇಕು ಎನ್ನುವಂತೆ ಕಾಣಿಸಲೂ ಬಹುದು. ಆದರೆ ಕೆಲಸದ ಒತ್ತಡ, ಗೊಂದಲಗಳು ಅವಳನ್ನು ನೆಮ್ಮದಿಯಾಗಿಡುವುದಿಲ್ಲ.
ಒತ್ತಡದ ಬದುಕಿನಲ್ಲಿ ಆಕೆಯೂ ತನ್ನ ಗಂಡ, ಮಕ್ಕಳು, ಸಂಸಾರ ಅಂಥ ಸಮಯ ಕೊಡಬೇಕಾಗುತ್ತದೆ. ಅಷ್ಟೇ ಅಲ್ಲ ಎಲ್ಲ ಗೃಹಿಣಿಯರಂತೆ ಮನೆಯ ಕೆಲಸಗಳನ್ನು ಮಾಡಿಕೊಂಡು ಹೊರಗೆ ಹೋಗಿ ಅಲ್ಲಿಯೂ ನಿಭಾಯಿಸಬೇಕಾಗುತ್ತದೆ. ಇದು ಒಂದು ದಿನದ ಕೆಲಸವಲ್ಲ ನಿತ್ಯದ ಬದುಕು. ಗಂಡತಂದಿದರಲ್ಲಿ ಬೇಯಿಸಿಕೊಂಡು ಮನೆಯಲ್ಲೇ ಠಿಕಾಣಿ ಹೂಡಬೇಕೆನ್ನುವ ಮನೋಭಾವ ಹೆಣ್ಣು ಮಕ್ಕಳಲ್ಲಿ ಕಡಿಮೆಯಾಗುತ್ತಿದೆ. ಆಕೆ ಕೂಡ ತಾನು ಸಂಪಾದಿಸಬೇಕೆನ್ನುವ ಹಠಕ್ಕೆ ಬಿದ್ದಿದ್ದಾಳೆ. ಆ ಮೂಲಕ ಸಂಸಾರಕ್ಕೆ ನೆರವಾಗುವ ಚಿಂತನೆ ಮಾಡುತ್ತಿದ್ದಾಳೆ.
ಮನೆಯಲ್ಲಿದ್ದುಕೊಂಡೇ ಏನಾದರೊಂದು ಕೆಲಸ ಮಾಡುವ ಮೂಲಕ ಒಂದಿಷ್ಟು ಹಣ ಸಂಪಾದಿಸುವತ್ತ ಗಮನ ಹರಿಸುತ್ತಿರುವುದು ಒಂದು ಒಳ್ಳೆಯ ಬೆಳವಣಿಗೆಯಾಗಿದೆ. ಇನ್ನು ಚುಮುಚುಮು ಬೆಳಕಿರುವಾಗಲೇ ಮನೆಯಿಂದ ಆಚೆ ಬಂದು ಬೀದಿಯನ್ನೆಲ್ಲ ಗುಡಿಸಿ ಸ್ವಚ್ಛಗೊಳಿಸುವ ಮಹಿಳಾ ಪೌರಕಾರ್ಮಿಕರ ದೊಡ್ಡ ದಂಡೇ ಇದ್ದು ಅವರ ಕಾರ್ಯಕ್ಕೆ ಶ್ಲಾಘನೆ ಹೇಳಬೇಕಾಗುತ್ತದೆ. ಮನೆ, ಕುಟುಂಬದ ಕೆಲಸದ ಜತೆಯಲ್ಲಿಯೇ ಮನೆಗಳಲ್ಲಿ ಆಸ್ಪತ್ರೆ, ಕಚೇರಿ, ಕಾರ್ಖಾನೆ, ಹೊಲಗದ್ದೆ, ತೋಟ ಹೀಗೆ ತಳಮಟ್ಟದಲ್ಲಿ ದುಡಿಯುವ ಮಹಿಳೆಯರು ಇಲ್ಲದೆ ಹೋಗಿದ್ದರೆ ಮೇಲ್ಮಟ್ಟದಲ್ಲಿ ನಿಂತು ಸಾಧನೆಗೈಯ್ಯಲು ಅದೆಷ್ಟೋ ಮಂದಿಗೆ ಸಾಧ್ಯವಾಗುತ್ತಿರಲಿಲ್ಲ ಎಂಬುದನ್ನು ಒಪ್ಪಿಕೊಳ್ಳಲೇ ಬೇಕಾಗುತ್ತದೆ.




