ಇಂಡಿಯನ್ ಪ್ರೀಮಿಯರ್ ಲೀಗ್ನ (IPL) 18ನೇ ಆವೃತ್ತಿ ಇದೇ ತಿಂಗಳು ಅಂದರೆ ಮಾ.22 ರಿಂದ ಪ್ರಾರಂಭವಾಗಲಿದೆ. ಎರಡು ತಿಂಗಳು ಕಾಲ ನಡೆಯಲಿರುವ ಮಿಲಿಯನ್ ಡಾಲರ್ ಟೂರ್ನಿಯಲ್ಲಿ ಒಟ್ಟು 10 ತಂಡಗಳು ಭಾಗಿ ಆಗುತ್ತಿವೆ. ಈ ಬಾರಿಯ ಟೂರ್ನಿಯಲ್ಲಿ RCB ಕೂಡ ಕಪ್ ಗೆಲ್ಲುವ ಫೆವರಿಟ್ ತಂಡಗಳಲ್ಲಿ ಒಂದಾಗಿದೆ.
ಏತನ್ಮಧ್ಯೆ, ಐಪಿಎಲ್ ಹೊಸ್ತಿಲಲ್ಲೆ ಪಾಕಿಸ್ತಾನದ ವೇಗಿ ಮುಂದಿನ ಆವೃತ್ತಿಯ ಐಪಿಎಲ್ಗೆ ಅರ್ಹತೆ ಪಡೆಯುವುದಾಗಿ ತಿಳಿಸಿದ್ದಾರೆ. 2008ರಲ್ಲಿ ಪಾಕಿಸ್ತಾನಿ ಆಟಗಾರರು ಐಪಿಎಲ್‌ನ ಮೊದಲ ಸೀಸನ್‌ನಲ್ಲಿ ಭಾಗವಹಿಸಿದ್ದರು, ಅದರ ಬಳಿಕ ಭಾರತದಲ್ಲಿ ಪಾಕ್ ಪ್ರೇರಿತ ಭಯೋತ್ಪಾದನಾ ದಾಳಿಗಳಿಂದಾಗಿ ಎರಡು ದೇಶಗಳ ನಡುವಿನ ಸಂಬಂಧ ಹಳಸಿತು. ಅಲ್ಲದೇ ಪಾಕ್ ಆಟಗಾರರನ್ನು ಬಿಸಿಸಿಐ ಐಪಿಎಲ್ನಿಂದಲೂ ನಿಷೇಧಿಸಿತು.
ಈ ನಿಷೇಧದ ಹೊರತಾಗಿಯೂ 2026ರ ಐಪಿಎಲ್ ಆಡಲು ಪಾಕಿಸ್ತಾನದ ವೇಗಿ ಮೊಹಮ್ಮದ್ ಆಮಿರ್ ಅರ್ಹತೆ ಪಡೆಯಲಿದ್ದಾರೆ. ಆದರೆ, ಐಪಿಎಲ್ನಲ್ಲಿ ಆಡಲಿದ್ದಾರಾ ಇಲ್ಲವಾ ಎಂದು ತಿಳಿಯಲು 2026ರ ಮಿನಿ ಹರಾಜಿನವರೆಗೆ ಕಾಯಬೇಕಿದೆ.
ನಿಷೇಧದ ನಂತರವೂ ಆಮಿರ್ ಐಪಿಎಲ್ನಲ್ಲಿ ಹೇಗೆ ಆಡಲು ಸಾಧ್ಯ?: ವಾಸ್ತವವಾಗಿ, ಮೊಹಮ್ಮದ್ ಆಮಿರ್ ಅವರ ಪತ್ನಿ ನರ್ಗೀಸ್ ಯುಕೆ ಪ್ರಜೆ ಆಗಿದ್ದಾರೆ. ಮೊಹಮ್ಮದ್ ಆಮಿರ್ ಕೂಡ ಯುಕೆ ಪೌರತ್ವಕ್ಕಾಗಿ ಅರ್ಜಿ ಸಲ್ಲಿಸಿದ್ದು, ಶೀಘ್ರದಲ್ಲೇ ಅಲ್ಲಿಯ ಪೌರತ್ವ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಯುಕೆ ಪೌರತ್ವ ಸಿಕ್ಕರೆ ಪಾಕ್ ತೊರೆಯಲಿರುವ ಅಮಿರ್ ಐಪಿಎಲ್ಗೂ ಅರ್ಹತೆ ಪಡೆಯಲಿದ್ದಾರೆ. ಈ ಹಿನ್ನೆಲೆ ಮುಂದಿನ ವರ್ಷ ನಡೆಯುವ ಮಿನಿ ಹರಾಜಿಗೆ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಲು ಆಮಿರ್ ಮುಂದಾಗಿದ್ದಾರೆ.
RCB ಪರ ಆಡುವ ಬಯಕೆ: ಈ ಬಗ್ಗೆ ಸ್ವತಃ ಆಮಿರ್ ಮಾಹಿತಿ ನೀಡಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಆಮಿರ್, ‘ಮುಂದಿನ ವರ್ಷದ ವೇಳೆಗೆ ನಾನು ಐಪಿಎಲ್ ಆಡಲು ಅರ್ಹತೆ ಪಡೆಯಲಿದ್ದೇನೆ. ಐಪಿಎಲ್ನಲ್ಲಿ ಆಡುವ ಅವಕಾಶ ಸಿಕ್ಕರೆ ಯಾವುದೇ ಕಾರಣಕ್ಕೂ ತಪ್ಪಿಸಿಕೊಳ್ಳಲ್ಲ ಎಂದು ಹೇಳಿದ್ದಾರೆ. ಅಲ್ಲದೇ ಯಾವ ತಂಡದ ಪರ ಆಡಲು ಬಯಸಿದ್ದೀರಿ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಆಮಿರ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡುವ ಬಯಕೆ ವ್ಯಕ್ತ ಪಡಿಸಿದ್ದಾರೆ.
ಮತ್ತೊಂದೆಡೆ ಆಮಿರ್, ವಿರಾಟ್ ಕೊಹ್ಲಿ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾರೆ. ಜೊತೆಗೆ RCB ತಂಡದ ಬಿಗ್ ಫ್ಯಾನ್ ಕೂಡ ಆಗಿದ್ದಾರೆ. ಈ ಹಿನ್ನೆಲೆ ಆರ್ಸಿಬಿ ಪರ ಕಣಕ್ಕಿಳಿದರೂ ಅಚ್ಚರಿ ಪಡಬೇಕಿಲ್ಲ.
ಈ ಹಿಂದೆ ಪಾಕಿಸ್ತಾನದ ಮಾಜಿ ಆಲ್‌ರೌಂಡರ್ ಅಜರ್ ಮಹಮೂದ್ ಕೂಡ ಯುನೈಟೆಡ್ ಕಿಂಗ್‌ಡಮ್ ಪೌರತ್ವ ಪಡೆದಿದ್ದ ಕಾರಣದಿಂದಾಗಿ 2012 ಮತ್ತು 2013ರ ಐಪಿಎಲ್ ಋತುಗಳಲ್ಲಿ ಪಂಜಾಬ್ ಕಿಂಗ್ಸ್ ಪರ ಮತ್ತು 2015ರಲ್ಲಿ ಕೆಕೆಆರ್ ಪರ ಆಡಿದ್ದರು.



