ಸಂಭಾಲ್: ಬಿಜೆಪಿ ನಾಯಕರೊಬ್ಬರಿಗೆ ಮೂವರು ಅಪರಿಚಿತ ವ್ಯಕ್ತಿಗಳು ವಿಷಕಾರಿ ಚುಚ್ಚುಮದ್ದು ನೀಡಿ ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದ ಸಂಭಾಲ್ನಲ್ಲಿ ಸೋಮವಾರ ನಡೆದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಜುನವೈ ಪೊಲೀಸ್ ಠಾಣಾ ವ್ಯಾಪ್ತಿಯ ದಫ್ತಾರಾ ಗ್ರಾಮದ ಗುಲ್ಫಾಮ್ ಸಿಂಗ್ ಯಾದವ್ (60) ಮೃತರು. ಯಾದವ್ ಅವರು, ತಮ್ಮ ಜಮೀನಿನಲ್ಲಿ ಕುಳಿತಿದ್ದಾಗ ಮೂವರು ದುಷ್ಕರ್ಮಿಗಳು ಬೈಕ್ನಲ್ಲಿ ಬಂದು ವಿಷಪೂರಿತ ಇಂಜೆಕ್ಷನ್ ಚುಚ್ಚಿ ಅಲ್ಲಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ವಿಷ ಮೈಯಲ್ಲಿ ಹರಡಿ ತೀವ್ರ ಅಸ್ವಸ್ಥರಾಗಿದ್ದ ಯಾದವ್ ಅವರನ್ನು ಚಿಕಿತ್ಸೆಗಾಗಿ ಅಲಿಗಢ ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗಮಧ್ಯೆಯೇ ಮೃತಪಟ್ಟಿದ್ದಾರೆ. ಕುಟುಂಬಸ್ಥರಿಂದ ಯಾವುದೇ ದೂರು ಬಂದಿಲ್ಲವಾದರೂ, ಪ್ರಕರಣದ ತನಿಖೆಗಾಗಿ ಪೊಲೀಸ್ ತಂಡವನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಯಾದವ್ ಬಿಜೆಪಿಯ ಮುಖಂಡರಾಗಿದ್ದು, ಇಲ್ಲಿನ ವಿಧಾನಸಭಾ ಉಪಚುನಾವಣೆಯಲ್ಲಿ ಸ್ಪರ್ಧಿಸಿದ್ದರು. ರಾಜಕೀಯ ಕಾರಣಗಳಿಗೆ ಅವರನ್ನು ಹತ್ಯೆ ಮಾಡಲಾಗಿದೆಯೇ ಎಂಬುದನ್ನು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.



