ಬಹುನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾರ್ಚ್ 22 ರಿಂದ ಪ್ರಾರಂಭವಾಗಲಿದೆ. ಈಗಾಗಲೆ ಎಲ್ಲಾ ತಂಡಗಳು ಮಿಲಿಯನ್ ಡಾಲರ್ ಟೂರ್ನಿಗಾಗಿ ಸಜ್ಜಾಗಿವೆ. ಇದರ ನಡುವೆಯೆ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ದೊಡ್ಡ ಆಘಾತ ಎದುರಾಗಿದೆ. ಸ್ಪೋಟಕ ಬ್ಯಾಟರ್ ಈ ಬಾರಿಯ ಐಪಿಎಲ್ನಿಂದ ಹೊರಗುಳಿಯಲಿದ್ದಾರೆ.
ಮಾ.22 ರಂದ ಲೀಗ್ನ ಮೊದಲ ಪಂದ್ಯ ನಡೆಯಲಿದ್ದು ಇದರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಖಾಮುಖಿ ಆಗುತ್ತಿವೆ. ಮಾರ್ಚ್ 24 ರಂದು ಡೆಲ್ಲಿ ಕ್ಯಾಪಿಟಲ್ಸ್ ತನ್ನ ಮೊದಲ ಪಂದ್ಯದಲ್ಲಿ ಲಕ್ನೋ ಸೂಪರ್ಜೈಂಟ್ಸ್ ಎದುರಿಸಲಿದೆ. ಇದಕ್ಕೂ ಮೊದಲೆ ತಂಡಕ್ಕೆ ಇಂಗ್ಲೆಂಡ್ನ ಸ್ಟಾರ್ ಬ್ಯಾಟ್ಸ್ಮನ್ ಶಾಕ್ ನೀಡಿದ್ದಾರೆ.
ಈ ಬಾರಿಯ ಮೆಗಾ ಹರಾಜಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 6.25 ಕೋಟಿ ಕೊಟ್ಟು ಹ್ಯಾರಿ ಬ್ರೂಕ್ ಅವರನ್ನು ಖರೀದಿ ಮಾಡಿತ್ತು. ಆದರೆ ಬ್ರೂಕ್ ಐಪಿಎಲ್ 2025ರಿಂದ ಹಿಂದೆ ಸರಿಯುತ್ತಿರುವುದಾಗಿ ಸಾಮಾಜಿಕ ಮಾಧ್ಯಮದಲ್ಲಿ ಘೋಷಿಸಿದ್ದಾರೆ.
“ಮುಂಬರು ಇಂಗ್ಲೆಂಡ್ ತಂಡದ ಏಕದಿನ ಮತ್ತು ಟೆಸ್ಟ್ ಸರಣಿಗಾಗಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಬ್ರೂಕ್ ತಿಳಿಸಿದ್ದಾರೆ. “ನಾನು ತುಂಬಾ ಕಠಿಣ ನಿರ್ಧಾರ ತೆಗೆದುಕೊಂಡಿದ್ದೇನೆ. ಐಪಿಎಲ್ 2025ರಿಂದ ಹೊರಗುಳಿಯುತ್ತಿದ್ದೇನೆ. ಈ ನಿರ್ಧಾರ ತೆಗೆದುಕೊಂಡಿದ್ದಕ್ಕಾಗಿ ನಾನು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಫ್ರಾಂಚೈಸಿಯ ಅಭಿಮಾನಿಗಳಿಗೆ ಕ್ಷಮೆಯಾಚಿಸುತ್ತೇನೆ. ನನಗೆ ಕ್ರಿಕೆಟ್ ತುಂಬಾ ಇಷ್ಟ. ನಾನು ಚಿಕ್ಕವನಿದ್ದಾಗಿನಿಂದ ದೇಶಕ್ಕಾಗಿ ಆಡುವ ಕನಸು ಕಂಡಿದ್ದೆ. ನಾನು ಇಷ್ಟಪಡುವ ಆಟವನ್ನು ಆಡಲು ಅವಕಾಶ ನೀಡಿದ ಇಂಗ್ಲೆಂಡ್ಗೆ ನಾನು ಕೃತಜ್ಞನಾಗಿದ್ದೇನೆ” ಎಂದು ಬ್ರೂಕ್ ತಿಳಿಸಿದ್ದಾರೆ.
2 ವರ್ಷ ಬ್ಯಾನ್ ಸಾಧ್ಯತೆ: ಹ್ಯಾರಿ ಬ್ರೂಕ್ ಐಪಿಎಲ್ನಿಂದ ಹಿಂದೆ ಸರಿಯುತ್ತಿರುವುದು ಇದು ಎರಡನೇ ಬಾರಿ. ವೈಯಕ್ತಿಕ ಕಾರಣಗಳಿಂದ ಐಪಿಎಲ್ 2024ರಲ್ಲಿ ಅವರು ಆಡಿರಲಿಲ್ಲ. ಈ ಬಾರಿಯೂ ಅವರು ಹಿಂದೆ ಸರಿಯುತ್ತಿದ್ದ ಎರಡು ವರ್ಷ ಐಪಿಎಲ್ನಿಂದ ಬ್ಯಾನ್ ಆಗುವ ಸಾಧ್ಯತೆ ಇದೆ. ಕಾರಣ ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ಐಪಿಎಲ್ ಆಡಳಿತ ಮಂಡಳಿ ಹೊಸ ನಿಯಮವನ್ನು ಪರಿಚಯಿಸಿತು.
ಆ ನಿಯಮಗಳ ಪ್ರಕಾರ, ಹರಾಜಿನಲ್ಲಿ ಮಾರಾಟವಾದ ಆಟಗಾರನು ಸೂಕ್ತ ಕಾರಣವಿಲ್ಲದೆ ಐಪಿಎಲ್ನಿಂದ ಹಿಂದೆ ಸರಿಯಬಾರದು. ಯಾವುದೇ ಸರಿಯಾದ ಕಾರಣವಿಲ್ಲದಿದ್ದರೆ, ಆ ಆಟಗಾರನನ್ನು ಎರಡು ಐಪಿಎಲ್ನ ಎರಡು ಋತುಗಳಿಂದ ನಿಷೇಧಿಸಲಾಗುವುದು ಎಂದು ಸ್ವಷ್ಟವಾಗಿ ತಿಳಿಸಿತ್ತು. ಈ ಹಿನ್ನೆಲೆ ಬ್ರೂಕ್ ಎರಡು ವರ್ಷಗಳ ಕಾಲ ಐಪಿಎಲ್ನಿಂದ ಬ್ಯಾನ್ ಆಗುವ ಸಾಧ್ಯತೆ ಇದೆ.
2025ರ ಚಾಂಪಿಯನ್ಸ್ ಟ್ರೋಫಿ ಸೋಲಿನ ನಂತರ ಜೋಸ್ ಬಟ್ಲರ್ ನಾಯಕತ್ವದಿಂದ ಕೆಳಗಿಳಿದರು. ಬಟ್ಲರ್ ಬದಲಿಗೆ ಬ್ರೂಕ್ ಅವರನ್ನು ನಾಯಕನನ್ನಾಗಿ ತಂಡಕ್ಕೆ ನೇಮಿಸುವ ಸಾಧ್ಯತೆಯಿದೆ. ಅದಕ್ಕಾಗಿಯೇ ಬ್ರೂಕ್ ಐಪಿಎಲ್ 2025ರಲ್ಲಿ ಆಡದಿರಲು ನಿರ್ಧರಿಸಿದ್ದಾರೆ ಎಂದು ತೋರುತ್ತಿದೆ.



