ಬೆಳಗಾವಿ : ಇಲ್ಲಿನ ಕಿಣೆಯ ಗ್ರಾಮ ಪಂಚಾಯತ್ ಪಿಡಿಓಗೆ ಕನ್ನಡ ಮಾತನಾಡದಂತೆ, ಮರಾಠಿ ಮಾತನಾಡುವಂತೆ ಅವಾಜ್ ಹಾಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮರಾಠಿ ಗುಂಡಗೆ ಬೆದರದೆ ಕನ್ನಡ ಮಾತನಾಡಿ ಧೈರ್ಯ ಪ್ರದರ್ಶಿಸಿದ ಪಿಡಿಓ ಗೆ ಸನ್ಮಾನ ಮಾಡಲಾಗಿದೆ.
ಈ ವಿಚಾರ ತಿಳಿದು ಸ್ಥಳಕ್ಕೆ ದೌಡಾಯಿಸಿದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು, ಪಿಡಿಓ ಗೆ ಧೈರ್ಯ ತುಂಬಿ ಸನ್ಮಾನ ಮಾಡಿ ಮರಾಠಿಗನ ದಬ್ಬಾಳಿಕೆಯನ್ನು ಮೆಟ್ಟಿನಿಂತ ಅಧಿಕಾರಿಗೆ ಧನ್ಯವಾದ ತಿಳಿಸಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಬೆಳಗಾವಿ ಕರವೇ ಜಿಲ್ಲಾಧ್ಯಕ್ಷ ದೀಪಕ ಬಗುಡಗನಟ್ಟಿ, ಕನ್ನಡದ ಹಿತ ಕಾಪಾಡಿ, ಕನ್ನಡದ ಅಭಿಮಾನ ಪ್ರದರ್ಶಿಸಿದ ಬೆಳಗಾವಿ ತಾಲ್ಲೂಕಿನ ಕಿಣಿಯೇ ಗ್ರಾಮ ಪಂಚಾಯತಿಯ ಪಿಡಿಓ ನಾಗೇಂದ್ರ ಪತ್ತಾರ ಅವರಿಗೆ ಕಿಣಿಯೇ ಗ್ರಾಮ ಪಂಚಾಯತಿ ಕಚೇರಿಯಲ್ಲೇ ಸತ್ಕರಿಸಿ ಗೌರವಿಸಲಾಗಗಿದೆ ಎಂದು ತಿಳಿಸಿದ್ದಾರೆ.
ಇನ್ನು ಈ ಘಟನೆ ಬೆನ್ನಲ್ಲೇ ಎಚ್ಚೆತ್ತಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್,ಇನ್ಮುಂದೆ ಜಿಲ್ಲಾಡಳಿತದ ಎಲ್ಲಾ ವ್ಯವಹಾರಗಳು ಹಾಗೂ ದಾಖಲೆಗಳನ್ನು ಮರಾಠಿ ಭಾಷೆಯಲ್ಲಿ ನೀಡದಂತೆ ಸಿಬ್ಬಂದಿಗೆ ಸೂಚನೆ ನೀಡಿದ್ದಾರೆ.




