ಕನ್ನಡ ಚಿತ್ರರಂಗದ ಖ್ಯಾತ ನಟಿ ಶುಭಾ ಪೂಂಜಾ ತಾಯಿ ಇತ್ತೀಚಿಗೆ ಇಹಲೋಕ ತ್ಯಜಿಸಿದರು. ತಮ್ಮ ಬಲದಂತಿದ್ದ ತಾಯಿಯನ್ನು ಕಳೆದುಕೊಂಡು ಅತೀವ ದುಃಖದಲ್ಲಿರುವ ಶುಭಾ ಪೂಂಜಾ ತಾಯಿ ಅಗಲಿ ನಾಲ್ಕು ದಿನಕ್ಕೆ ತಾವು ಒಪ್ಪಿಕೊಂಡಿದ್ದ ಕಾರ್ಯಕ್ರಮದ ಚಿತ್ರೀಕರಣಕ್ಕೆ ಬಂದಿದ್ದಾರೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಬಾಯ್ಸ್ ವರ್ಸಸ್ ಗರ್ಲ್ಸ್ ರಿಯಾಲಿಟಿ ಶೋನಲ್ಲಿ ಶುಭಾ ಪೂಂಜಾ ಗರ್ಲ್ಸ್ ಗ್ಯಾಂಗ್ ಲೀಡರ್ ಆಗಿದ್ದಾರೆ. ಕಾರ್ಯಕ್ರಮದಲ್ಲಿ ಸದಾ ಲವಲವಿಕೆಯಿಂದ ಇರುತ್ತಿದ್ದ ನಟಿ ಶುಭಾ ಪೂಂಜಾ ಈ ಬಾರಿ ನನ್ನ ಮನಸ್ಥಿತಿ ಸರಿ ಇಲ್ಲ ಎಂದು ಕಣ್ಣೀರು ಹಾಕಿದ್ದಾರೆ. ಶುಭಾ ಪೂಂಜಾ ತಾಯಿಯನ್ನು ಕಳೆದುಕೊಂಡು ನಾಲ್ಕು ದಿನಕ್ಕೆ ಬಾಯ್ಸ್ ವರ್ಸಸ್ ಗರ್ಲ್ಸ್ ಕಾರ್ಯಕ್ರಮದ ಚಿತ್ರೀಕರಣಕ್ಕೆ ಆಗಮಿಸಿದ್ದಾರೆ.
ಕಾರ್ಯಕ್ರಮದ ಮಧ್ಯೆ ಈ ವಿಚಾರವನ್ನು ನಿರೂಪಕಿ ಅನುಪಮಾ ಗೌಡ ಪ್ರಸ್ತಾಪ ಮಾಡಿದ್ದು, ಶುಭಾ ತಾಯಿ ಅಗಲಿ ನಾಲ್ಕು ದಿನ ಆಗಿದೆ ಅಷ್ಟೇ ಎಂದು ಹೇಳಿದ್ದಾರೆ. ಈ ವೇಳೆ ಜೋರಾಗಿ ಕಣ್ಣೀರಿಟ್ಟ ಶುಭಾ ಪೂಂಜಾ ತಾಯಿ ನಿಧನದ ಹಿಂದಿನ ದಿನ ಏನಾಯಿತು ಎನ್ನುವುದನ್ನು ಹೇಳಿಕೊಂಡಿದ್ದಾರೆ. ‘ಅಮ್ಮ ಸಾಯುವ ಹಿಂದಿನ ದಿನ ನಾನು ಅವರ ಕೈ ಬಿಟ್ಟಿಲ್ಲ. ಬಿಗಿಯಾಗಿ ಕೈ ಹಿಡಿದುಕೊಂಡೇ ಇದ್ದೆ. ರಾತ್ರಿ ಇಡೀ ಉಸಿರಾಡಲು ಕಷ್ಟ ಪಡುತ್ತಿದ್ದರು.
ಅಮ್ಮನ ಬಿಟ್ಟು ಹೇಗಿರುವುದು ಅಂತಲೇ ಗೊತ್ತಾಗುತ್ತಿಲ್ಲ. ನನ್ನ ಮನಸ್ಥಿತಿ ಸರಿ ಇಲ್ಲ ಎಂದು ಶುಭಾ ಪೂಂಜಾ ಜೋರಾಗಿ ಕಣ್ಣೀರಿಟ್ಟಿದ್ದಾರೆ. ಶುಭಾ ದುಃಖ ನೋಡಿದ ಕಾರ್ಯಕ್ರಮದ ಇತರ ಸ್ಪರ್ಧಿಗಳು ಕೂಡ ಕಣ್ಣೀರು ಹಾಕಿದ್ದಾರೆ.
ನಟಿ ಶುಭಾ ಪೂಂಜಾ ತಾಯಿಗೆ ಏನಾಗಿತ್ತು: 70 ವರ್ಷದ ಶುಭಾ ಪೂಂಜಾ ತಾಯಿ ನ್ಯುಮೋನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಅವರ ಶ್ವಾಸಕೋಶದಲ್ಲಿ ನೀರು ತುಂಬಿದ್ದ ಕಾರಣ ಆರೋಗ್ಯದಲ್ಲಿ ತೀವ್ರ ಏರುಪೇರಾಗಿತ್ತು. ಕಳೆದ ನಾಲ್ಕು ತಿಂಗಳಿನಿಂದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಶುಭಾ ಪೂಂಜಾ ತಾಯಿ, ಮಾರ್ಚ್ 6ರಂದು ಆಸ್ಪತ್ರೆಯಲ್ಲಿ ವಿಧಿವಶರಾದರು.
ಈ ದುಃಖದ ವಿಚಾರವನ್ನು ಶುಭಾ ಪೂಂಜಾ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ ಮೂಲಕ ಹಂಚಿಕೊಂಡಿದ್ದರು. ‘ಅಮ್ಮ ನನ್ನ ನೀನು ಯಾಕೆ ಬಿಟ್ಟು ಹೋದೆ. ನೀನು ಇಲ್ಲದೆ ನನಗೆ ಜೀವನವಿಲ್ಲ. ನಿನ್ನ ಬಿಟ್ಟು ನನಗೆ ಬದುಕಲು ಬರುವುದು ಇಲ್ಲ. 24 ಗಂಟೆ ನಿನ್ನ ಜೊತೆಯಲ್ಲೇ ಇರುತ್ತಿದ್ದೆ. ಈಗ ನಾನು ಏನು ಮಾಡಲಿ? ಎಲ್ಲಿ ಹೋಗಲಿ? ಯಾರಿಗೋಸ್ಕರ ವಾಪಸ್ ಮನೆಗೆ ಬರಲಿ?. ನೀನು ನನ್ನ ಯಾಕೆ ಬಿಟ್ಟು ಹೋದೆ ನನ್ನ ಇಡೀ ಜೀವನಕ್ಕೆ ಅರ್ಥವಿಲ್ಲದಂತೆ ಆಯ್ತು. ನನ್ನ ಇಡೀ ಜೀವನವೇ ನೀನಾಗಿದ್ದೆ ನನ್ನ ಯಾಕೆ ಬಿಟ್ಟು ಹೋದೆ’ ಎಂದು ನೋವು ತೋಡಿಕೊಂಡಿದ್ದರು.




