ತಿರುವನಂತಪುರ: ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಹಾಗೂ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ವಿರುದ್ಧ ನೀಡಿದ ಹೇಳಿಕೆಯನ್ನು ಹಿಂಪಡೆಯಲು ಮತ್ತು ವಿಷಾದ ವ್ಯಕ್ತಪಡಿಸಲು
ನಿರಾಕರಿಸಿರುವ ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿ ಅವರ ಮರಿ ಮೊಮ್ಮಗ ತುಷಾರ್ ಗಾಂಧಿ ಬಂಧನಕ್ಕೆ ಕೇಸರಿ ಪಡೆ ಶುಕ್ರವಾರ ಒತ್ತಾಯಿಸಿದ.
ಕೇರಳದ ತಿರುವನಂತಪುರದ ನಯಪ್ರಿಂಕರದಲ್ಲಿ ಗಾಂಧಿವಾದಿ ಪಿ. ಗೋಪಿನಾಥನ್ ನಾಯರ್ ಅವರ ಪ್ರತಿಮೆ ಅನಾವರಣ ಸಂದರ್ಭದಲ್ಲಿ ಗುರುವಾರ ಮಾತನಾಡಿದ್ದ, ತುಷಾರ್, ‘ಬಿಜೆಪಿ ಮತ್ತು ಆರ್‌ಎಸ್‌ಎಸ್ ಎರಡೂ ಅಪಾಯಕಾರಿ ಹಾಗೂ ಕಪಟತನವಿರುವ ಶತ್ರುಗಳು. ಆರ್‌ಎಸ್‌ಎಸ್ ಎಂದರೆ ವಿಷವಿದ್ದಂತೆ’ ಎಂದು ಆರೋಪಿಸಿದ್ದರು.
ತುಷಾರ್ ಅವರ ಈ ಹೇಳಿಕೆ ಖಂಡಿಸಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರು, ಅವರಿದ್ದ ಕಾರನ್ನು ತಡೆದು, ಘೋಷಣೆ ಕೂಗಿದ್ದರು. ಕೊಚ್ಚಿ, ಬಳಿಯ ಅಲುವದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ತುಷಾರ್, ನಾನು ಒಮ್ಮೆ ನೀಡಿದ ಹೇಳಿಕೆಯನ್ನು ಹಿಂಪಡೆಯುವುದಿಲ್ಲ. ವಿಷಾದವನ್ನೂ ವ್ಯಕ್ತಪಡಿಸುವುದಿಲ್ಲಎಂದು ಸ್ಪಷ್ಟಪಡಿಸಿದ್ದಾರೆ.




