ಭದ್ರಾದ್ರಿ ಕೊತಗುಡೆಂ (ತೆಲಂಗಾಣ) : ಇಲ್ಲಿನ ಚಂದ್ರುಗೊಂಡ ಮಂಡಲದ ಬಡ ಕೂಲಿ ಕಾರ್ಮಿಕ ಜನಪತಿ ವೆಂಕಟೇಶ್ವರಲು ಎಂಬುವವರಿಗೆ ₹22,86,014 ಪಾವತಿಸುವಂತೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ನೋಟಿಸ್ ಜಾರಿ ಮಾಡಲಾಗಿದೆ.
ವಿಜಯವಾಡದಲ್ಲಿರುವ ವಾಣಿಜ್ಯ ತೆರಿಗೆ ಕಚೇರಿಯ ಸಹಾಯಕ ಆಯುಕ್ತರು ಈ ನೋಟಿಸ್ ನೀಡಿದ್ದು, ವೆಂಕಟೇಶ್ವರಲು ಅವರು 2022ರಲ್ಲಿ “ಭಾಗ್ಯಲಕ್ಷ್ಮಿ ಎಂಟರ್‌ಪ್ರೈಸಸ್” ಹೆಸರಿನಲ್ಲಿ ₹1 ಕೋಟಿ ಮೌಲ್ಯದ ಗ್ರಾನೈಟ್ ವ್ಯವಹಾರ ನಡೆಸಿದ್ದರು ಮತ್ತು ಇದಕ್ಕೆ ಅನ್ವಯವಾಗುವ ಜಿಎಸ್‌ಟಿ ಪಾವತಿಸಲು ವಿಫಲರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ, ದಿನನಿತ್ಯದ ಕೂಲಿ ಹಣದಲ್ಲಿ ಬದುಕುತ್ತಿರುವ ವೆಂಕಟೇಶ್ವರಲು ಅವರು ಅಂತಹ ಯಾವುದೇ ವ್ಯವಹಾರಕ್ಕೂ ತನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ. ಈ ತಿಂಗಳ 4ರಂದು ನೋಟಿಸ್ ಬಂದ ನಂತರ ದಾಖಲೆಯಲ್ಲಿ ನಮೂದಿಸಿರುವ ವಿಜಯವಾಡ ವಿಳಾಸಕ್ಕೆ ಖುದ್ದು ಭೇಟಿ ನೀಡಿ, ಸ್ಥಳದಲ್ಲಿ ಅಂತಹ ಯಾವುದೇ ಕಂಪನಿ ಅಸ್ತಿತ್ವದಲ್ಲಿಲ್ಲ ಎಂಬುದನ್ನ ಕಂಡುಕೊಂಡಿದ್ದಾರೆ.
ಗುರುತಿನ ಚೀಟಿ ದುರುಪಯೋಗದ ಶಂಕೆ : ಯಾರೋ ತಮ್ಮ ಆಧಾರ್ ವಿವರಗಳನ್ನು ದುರುಪಯೋಗಪಡಿಸಿಕೊಂಡು ವಂಚನೆಯಿಂದ ಪಾನ್ ಕಾರ್ಡ್ ಪಡೆದು, ತಮ್ಮ ಹೆಸರಿನಲ್ಲಿ ವ್ಯವಹಾರವನ್ನು ನೋಂದಾಯಿಸಿದ್ದಾರೆ ಎಂದು ವೆಂಕಟೇಶ್ವರಲು ಶಂಕಿಸಿದ್ದಾರೆ. ಆಘಾತಕಾರಿ ಸಂಗತಿಯೆಂದರೆ, ಅವರು 2022 ರಲ್ಲಿ ಪ್ಯಾನ್ ಕಾರ್ಡ್ ಸಹ ಹೊಂದಿರಲಿಲ್ಲ. ಆರು ತಿಂಗಳ ಹಿಂದೆಯಷ್ಟೇ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದಾರೆ.
ನ್ಯಾಯಕ್ಕಾಗಿ ಒತ್ತಾಯಿಸಿದ ಕಾರ್ಮಿಕ: ಜೀವನ ನಿರ್ವಹಣೆಗೆ ಹರಸಾಹಸ ಪಡುತ್ತಿರುವ ಕಾರ್ಮಿಕ ಭಾರಿ ತೆರಿಗೆ ಪಾವತಿ ನೋಟಿಸ್ಗೆ ಕಂಗೆಟ್ಟಿದ್ದಾರೆ. “ನನಗೆ ಗೊತ್ತಿಲ್ಲದೆ ನನ್ನ ಹೆಸರಿನಲ್ಲಿ ವ್ಯಾಪಾರ ಪರವಾನಗಿಯನ್ನು ಹೇಗೆ ನೀಡಲಾಯಿತು?” ಎಂದು ಪ್ರಶ್ನಿಸಿರುವ ಅವರು, ವಂಚನೆಯ ಬಗ್ಗೆ ತನಿಖೆ ನಡೆಸಿ ತನಗೆ ಪರಿಹಾರ ಒದಗಿಸಬೇಕೆಂದು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.