ಕಡಬ(ದಕ್ಷಿಣ ಕನ್ನಡ): ಎರಡೂವರೆ ವರ್ಷದ ಗಂಡು ಮಗು ಮಲಗಿದ್ದಲ್ಲೇ ಮೃತಪಟ್ಟ ಘಟನೆ ಜಿಲ್ಲೆಯ ಕಡಬ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ವರದಿಯಾಗಿದೆ. ದಂಪತಿಯ ಪುತ್ರ ರುದ್ರ ಪ್ರತಾಪ್ ಸಿಂಗ್ (2.5 ವರ್ಷ) ಮೃತಪಟ್ಟಿದ್ದಾನೆ.
ಉತ್ತರ ಪ್ರದೇಶದ ರಾಜಾ ಸಿಂಗ್ ಮತ್ತು ದಿವ್ಯಾಂಶಿ ದಂಪತಿ ಕೊಣಾಜೆಯ ಮಾಲ ಎಂಬಲ್ಲಿಗೆ ಬಂದು, ಲಿಂಡೋರಾಜ್ ಎಂಬವರ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಮಾರ್ಚ್ 25ರಂದು ಮಧ್ಯಾಹ್ನದ ವೇಳೆ ಮಗುವಿಗೆ ಊಟ ಕೊಟ್ಟು, ಬಳಿಕ ನಿದ್ದೆ ಬಂದ ಕಾರಣ ಮಲಗಿಸಿದ್ದರು. ಬಳಿಕ ಎಬ್ಬಿಸಿದಾಗ ಮಗು ಏಳದ ಕಾರಣ ಲಿಂಡೋರಾಜ್ ಕಾರಿನಲ್ಲಿ ಕಡಬ ಖಾಸಗಿ ಆಸ್ಪತ್ರೆಗೆ ಕರೆ ತಂದಿದ್ದರು. ವೈದ್ಯರು ಮಗುವನ್ನು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಕೂಡಲೇ, ಕಡಬ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯೂ ವೈದ್ಯರು ಮಗುವನ್ನು ಪರೀಕ್ಷಿಸಿ, ಸಾವನ್ನಪ್ಪಿರುವುದಾಗಿ ಹೇಳಿದ್ದಾರೆ. ಮಗು ಆಹಾರ ಗಂಟಲಲ್ಲಿ ಸಿಕ್ಕಿಕೊಂಡು ಅಥವಾ ಬೇರೆ ಯಾವುದೋ ಖಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವ ಸಾಧ್ಯತೆಯ ಬಗ್ಗೆ ತಾಯಿ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಪ್ರಕರಣದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ, ”ಈಗಾಗಲೇ ಮೃತ ಮಗುವಿನ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಅದರ ವರದಿ ಬಂದ ಬಳಿಕ ಸಾವಿನ ಬಗ್ಗೆ ನಿಖರ ಕಾರಣ ತಿಳಿಯಲಿದೆ” ಎಂದು ತಿಳಿಸಿದ್ದಾರೆ.