ಬೆಳಗಾವಿ: ಪಿಜಿಯೊಂದರಲ್ಲಿ ಎಂಬಿಎ ಪದವೀಧರ ಯುವತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ನೆಹರೂ ನಗರದಲ್ಲಿ ಮಂಗಳವಾರ ಸಂಜೆ ನಡೆದಿದೆ. ಯುವತಿ ಆತ್ಮಹತ್ಯೆಗೆ ಲವ್ ಬ್ರೇಕಪ್ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ನಿಖರ ಕಾರಣ ತಿಳಿದುಬಂದಿಲ್ಲ.
ವಿಜಯಪುರ ಜಿಲ್ಲೆಯ ಐಶ್ವರ್ಯಲಕ್ಷ್ಮೀ ಗಲಗಲಿ ಮೃತ ಯುವತಿ. ವಿಜಯಪುರದಲ್ಲಿಯೇ ಎಂಬಿಎ ಪದವಿ ಪೂರ್ಣಗೊಳಿಸಿದ್ದ ಐಶ್ವರ್ಯಲಕ್ಷ್ಮೀ ಕೆಲಸಕ್ಕಾಗಿ ಬೆಳಗಾವಿಗೆ ಬಂದಿದ್ದರು. ಕಳೆದ ಮೂರು ತಿಂಗಳಿನಿಂದ ಬೆಳಗಾವಿಯ ಸಾಯಿಕೃಪಾ ಪಿಜಿಯಲ್ಲಿ ವಾಸವಿದ್ದರು. ಬೆಳಗಾವಿಯ ಖಾಸಗಿ ಕಂಪನಿಯಲ್ಲಿ ಕಲಿಕಾ ತರಬೇತಿ ಅವಧಿಯಲ್ಲಿದ್ದರು. ಮಂಗಳವಾರ ಸಂಜೆ 6.30 ರಿಂದ 7.30ರ ಅವಧಿಯಲ್ಲಿ ಐಶ್ವರ್ಯ ಪಿಜಿಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಮಾಹಿತಿ ತಿಳಿದು ಸ್ಥಳಕ್ಕೆ ಬಂದ ಪೊಲೀಸ್ ಅಧಿಕಾರಿಗಳು, ಐಶ್ವರ್ಯಲಕ್ಷ್ಮೀ ಮೊಬೈಲ್ ಕಾಲ್ ಡಿಟೇಲ್ಸ್ ಪರಿಶೀಲನ ನಡೆಸಿದ್ದಾರೆ. ಬೆಳಗಾವಿಯ ಎಪಿಎಂಸಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಯುವತಿ ಆತ್ಮಹತ್ಯೆಗೆ ಅಸಲಿ ಕಾರಣ ಪೊಲೀಸರ ತನಿಖೆಯಿಂದ ಗೊತ್ತಾಗಬೇಕಿದೆ.