ಕಟಕ್ (ಒಡಿಶಾ): ಕಾನೂನು ಪತಿಯನ್ನು ನೋವು ಮತ್ತು ಹಿಂಸೆಯ ಮೂಲವಾಗಿ ಮಾರ್ಪಟ್ಟಿರುವ ಮದುವೆಯನ್ನು ಸಹಿಸಿಕೊಳ್ಳುವಂತೆ ಒತ್ತಾಯಿಸಲು ಸಾಧ್ಯವಿಲ್ಲ ಮತ್ತು ಈ ಬಂಧನ ಕಡಿದುಕೊಳ್ಳುವುದರಿಂದ ಮಾತ್ರ ಆತ ಶಾಂತಿ ಮತ್ತು ಭಾವನಾತ್ಮಕ ಪರಿಹಾರಕ್ಕೆ ಅರ್ಹನಾಗಿರುತ್ತಾನೆ ಎಂದು ಒಡಿಶಾ ಹೈಕೋರ್ಟ್ ಕೌಟುಂಬಿಕ ಕಲಹ ಪ್ರಕರಣವೊಂದರಲ್ಲಿ ಮಹತ್ವದ ತೀರ್ಪು ನೀಡಿದೆ.
ಪತ್ನಿಯಿಂದ ಪದೇ ಪದೇ ಆತ್ಮಹತ್ಯೆ ಅಥವಾ ಹಿಂಸೆಯ ಬೆದರಿಕೆಗಳು ಭಾವನಾತ್ಮಕ ಬ್ಲ್ಯಾಕ್‌ಮೇಲ್ ಮತ್ತು ಮಾನಸಿಕ ದಬ್ಬಾಳಿಕೆಗೆ ಸಮನಾಗಿರುತ್ತದೆ. ಮಾನಸಿಕ ಕ್ರೌರ್ಯದ ಅಡಿಯಲ್ಲಿ ಈ ಮದುವೆ ಸಂಬಂಧ ವಿಸರ್ಜಿಸಲು ಮಾನ್ಯ ಆಧಾರವೆಂದು ಪರಿಗಣಿಸಬಹುದು ಎಂದು ಒಡಿಶಾದ ಉಚ್ಚ ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿಗಳಾದ ಬಿ.ಪಿ. ರೌತ್ರೇ ಮತ್ತು ಚಿತ್ತರಂಜನ್ ದಾಸ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಪತಿಗೆ ವಿಚ್ಛೇದನ ನೀಡುವ ಕೌಟುಂಬಿಕ ನ್ಯಾಯಾಲಯದ ನಿರ್ಧಾರವನ್ನು ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದೆ.
ಕೌಟುಂಬಿಕ ನ್ಯಾಯಾಲಯದ ಆದೇಶ ಎತ್ತಿಹಿಡಿದ ಹೈಕೋರ್ಟ್: ಆಗಸ್ಟ್ 2023 ರಲ್ಲಿ ಕಟಕ್ ಕೌಟುಂಬಿಕ ನ್ಯಾಯಾಲಯವು ನೀಡಿದ್ದ ಆದೇಶ ಪ್ರಶ್ನಿಸಿ ಮಹಿಳೆ ಹೈಕೋರ್ಟ್ಗೆ ಮೇಲ್ಮನವಿ ಸಲ್ಲಿಸಿದ್ದರು. ಹಿಂದೂ ವಿವಾಹ ಕಾಯ್ದೆಯಡಿ ಪತಿಗೆ ವಿಚ್ಛೇದನವನ್ನು ನೀಡಿತು ಮತ್ತು ಪತ್ನಿಗೆ 63 ಲಕ್ಷ ರೂ.ಗಳ ಶಾಶ್ವತ ಜೀವನಾಂಶವನ್ನು ನೀಡಿತು. ಅದೇ ಸಮಯದಲ್ಲಿ, ನ್ಯಾಯಾಲಯವು ವೈವಾಹಿಕ ಹಕ್ಕುಗಳನ್ನು ಮರುಸ್ಥಾಪಿಸಬೇಕೆಂದು ಕೋರಿ ಮಹಿಳೆ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿತು.