ನವದೆಹಲಿ: “ಬಾಲಕಿಯ ಸ್ತನಗಳನ್ನು ಹಿಡಿಯುವುದು, ಆಕೆಯ ಪೈಜಾಮದ ದಾರ ಎಳೆಯುವುದು, ಮತ್ತು ಆಕೆಯನ್ನು ಚರಂಡಿಗೆ ಎಳೆಯಲು ಪ್ರಯತ್ನಿಸುವುದಷ್ಟೇ ಅತ್ಯಾಚಾರ ಅಥವಾ ಅತ್ಯಾಚಾರ ಪ್ರಯತ್ನದ ಅಪರಾಧವಾಗುವುದಿಲ್ಲ” ಎಂಬ ಅಲಹಾಬಾದ್ ಹೈಕೋರ್ಟ್ನ ಇತ್ತೀಚಿನ ವಿವಾದಾತ್ಮಕ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆ ನೀಡಿತು.
ಮಾರ್ಚ್ 17ರಂದು ಅಲಹಾಬಾದ್ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ ಮತ್ತು ಆಗಸ್ಟೀನ್ ಜಾರ್ಜ್ ಮಸಿಹ್ ಅವರನ್ನೊಳಗೊಂಡ ಪೀಠ ಇಂದು ವಿಚಾರಣೆ ನಡೆಸಿತು.
‘ವಿ ದಿ ವುಮೆನ್ ಆಫ್ ಇಂಡಿಯಾ’ ಎಂಬ ಸಂಘಟನೆಯು ಅಲಹಾಬಾದ್ ಹೈಕೋರ್ಟ್ ತೀರ್ಪನ್ನು ಸುಪ್ರೀಂ ಕೋರ್ಟ್ ಗಮನಕ್ಕೆ ತಂದ ನಂತರ ಸ್ವಯಂಪ್ರೇರಿತ ಪ್ರಕರಣವಾಗಿ ಕೈಗೆತ್ತಿಗೊಂಡು ವಿಚಾರಣೆ ಪ್ರಾರಂಭಿಸಲಾಗಿದೆ ಎಂದು ಪೀಠ ಹೇಳಿದೆ.
“ಈ ತೀರ್ಪು ಅಲಹಾಬಾದ್ ಹೈಕೋರ್ಟ್ನ ನ್ಯಾಯಾಧೀಶರ ಸಂಪೂರ್ಣ ಸೂಕ್ಷ್ಮತೆಯ ಕೊರತೆಯನ್ನು ತೋರಿಸುತ್ತಿದೆ” ಎಂದು ಪೀಠ ಬೇಸರ ವ್ಯಕ್ತಪಡಿಸಿದೆ.
ಕೇಂದ್ರ, ಯುಪಿ ಸರ್ಕಾರಕ್ಕೆ ನೋಟಿಸ್: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್, ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರದಿಂದ ಪ್ರತಿಕ್ರಿಯೆ ಕೇಳಿ ಸುಪ್ರೀಂ ನೋಟಿಸ್ ಜಾರಿ ಮಾಡಿದೆ. ಜೊತೆಗೆ ಅಟಾರ್ನಿ ಜನರಲ್ (ಎಜಿ) ಆರ್.ವೆಂಕಟರಮಣಿ ಮತ್ತು ಸಾಲಿಸಿಟರಲ್ ಜನರಲ್ (ಎಸ್ಜಿ) ತುಷಾರ್ ಮೆಹ್ತಾ ಅವರ ಸಹಾಯ ಕೋರಿತು.
ತೀರ್ಪು ಏನಾಗಿತ್ತು?: ಬಾಲಕಿಯ ಸ್ತನಗಳನ್ನು ಹಿಡಿಯುವುದು, ಅವಳ ಪೈಜಾಮದ ದಾರವನ್ನು ಎಳೆಯುವುದು, ಅವಳನ್ನು ಚರಂಡಿಯ ಕೆಳಗೆಳೆಯಲು ಪ್ರಯತ್ನಿಸುವುದು ಅತ್ಯಾಚಾರ ಯತ್ನ ಆರೋಪಗಳನ್ನು ಹೊರಿಸಲು ಸಾಕಾಗುವುದಿಲ್ಲ. ಈ ಕೃತ್ಯಗಳು ಕೇವಲ ಸಿದ್ಧತೆಯಷ್ಟೇ. ಇದು ಕೃತ್ಯ ಮಾಡಲು ನಿಜವಾದ ಪ್ರಯತ್ನಕ್ಕಿಂತ ಭಿನ್ನವಾಗಿದೆ ಎಂದು ಅಲಹಾಬಾದ್ ಹೈಕೋರ್ಟ್ ಹೇಳಿತ್ತು. ಇಬ್ಬರು ಆರೋಪಿಗಳು ಅಲ್ಲಿಸಿದ್ದ ಪರಿಷ್ಕರಣಾ ಅರ್ಜಿಯ ವಿಚಾರಣೆ ನಡೆಸಿದ್ದ ಅಲಹಾಬಾದ್ ಹೈಕೋರ್ಟ್ನ ನ್ಯಾಯಮೂರ್ತಿ ರಾಮ್ ಮನೋಹರ್ ನಾರಾಯಣ್ ಮಿಶ್ರಾ ಅವರಿದ್ದ ಏಕಪೀಠ ಮಾರ್ಚ್ 17ರಂದು ಈ ತೀರ್ಪು ನೀಡಿತ್ತು.