ಬೆಳಗಾವಿ: ಜಿಲ್ಲೆಯ ಕಿತ್ತೂರು ರಾಣಿ ಚೆನ್ನಮ್ಮ ಕಿರು ಮೃಗಾಲಯಕ್ಕೆ ಹೊಸದಾಗಿ ಸಿಂಹಿಣಿಯೊಂದು ಸೇರ್ಪಡೆಯಾಗಿದೆ. ಇನ್ಮುಂದೆ ಮೃಗಾಲಯಕ್ಕೆ ಬರುವ ಪ್ರವಾಸಿಗರು ಅದನ್ನು ಕಣ್ತುಂಬಿಕೊಳ್ಳಬಹುದು.
ಬೆಂಗಳೂರಿನ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದಿಂದ ಈ ಸಿಂಹಿಣಿಯನ್ನು ಭಾನುವಾರ ಬೆಳಗಾವಿ ತಾಲೂಕಿನ ಭೂತರಾಮನಹಟ್ಟಿಯಲ್ಲಿರುವ ಕಿರು ಮೃಗಾಲಯಕ್ಕೆ ಕರೆತರಲಾಗಿದೆ. 9 ವರ್ಷದ ಈ ಸಿಂಹಿಣಿ ಹೆಸರು ಭೃಂಗಾ.
ಫೆಬ್ರವರಿ 6ರಂದು ಕಿತ್ತೂರು ರಾಣಿ ಚೆನ್ನಮ್ಮ ಮೃಗಾಲಯದಲ್ಲಿ ‘ನಿರುಪಮಾ’ ಎಂಬ ಸಿಂಹಿಣಿ ಅನಾರೋಗ್ಯದಿಂದ ಮೃತಪಟ್ಟಿತ್ತು. ಅದಾದ ಬಳಿಕ ಇಲ್ಲಿನ ಕೃಷ್ಣಾ ಎಂಬ ಗಂಡು ಸಿಂಹ ಮಂಕಾಗಿತ್ತು. ಈಗ ಭೃಂಗಾ ಮೃಗಾಲಯ ಪ್ರವೇಶಿಸುತ್ತಿದ್ದಂತೆ ಕೃಷ್ಣಾ ಮತ್ತೆ ಫುಲ್ ಆ್ಯಕ್ಟಿವ್ ಆಗುತ್ತಿದೆ.
ಅರಣ್ಯಾಧಿಕಾರಿ ಪ್ರತಿಕ್ರಿಯೆ: ಈಟಿವಿ ಭಾರತ ಪ್ರತಿನಿಧಿ ಮೃಗಾಲಯದ ವಲಯ ಅರಣ್ಯಾಧಿಕಾರಿ ಪವನ ಕುರನಿಂಗ ಅವರನ್ನು ಸಂಪರ್ಕಿಸಿದಾಗ, ”ಬನ್ನೇರುಘಟ್ಟದಿಂದ ಭಾನುವಾರ ಒಂದು ಸಿಂಹಿಣಿಯನ್ನು ತಂದಿದ್ದೇವೆ. ಸದ್ಯಕ್ಕೆ ಕೆಲ ದಿನ ಕ್ವಾರಂಟೈನ್ನಲ್ಲಿ ಅದನ್ನು ಇಡುತ್ತೇವೆ. ಕೃಷ್ಣಾ ಸಿಂಹದ ಜೊತೆಗೆ ಹೊಂದಾಣಿಕೆ ನೋಡಿಕೊಂಡು ಮೃಗಾಲಯದ ಆವರಣದಲ್ಲಿ ಭೃಂಗಾಳನ್ನು ಬಿಡುತ್ತೇವೆ. ಆಗ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗುತ್ತದೆ” ಎಂದು ತಿಳಿಸಿದರು.