ಬೆಂಗಳೂರು: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ TATA ಐಪಿಎಲ್ ಪಂದ್ಯಗಳಿಗೆ ಏಪ್ರಿಲ್ 2ರಿಂದ ಚಾಲನೆ ಸಿಗಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಪಂದ್ಯಕ್ಕೆ ನಾಳೆ ಬೆಂಗಳೂರು ಆತಿಥ್ಯ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ.
ಪಂದ್ಯದ ಸಂದರ್ಭದಲ್ಲಿ ಸುಗಮ ಸಂಚಾರದ ದೃಷ್ಟಿಯಿಂದ ಕ್ರೀಡಾಂಗಣದ ಸುತ್ತಮುತ್ತಲಿನ ರಸ್ತೆಗಳಲ್ಲಿ ಸಂಚಾರ ವ್ಯವಸ್ಥೆಯಲ್ಲಿ ಮಾರ್ಪಾಡುಗಳನ್ನು ಮಾಡಲಾಗಿದೆ. ಏಪ್ರಿಲ್ 2ರಿಂದ ಮೇ 5ರ ವರೆಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವ ದಿನಗಳಲ್ಲಿ ಸಂಜೆ 3 ಗಂಟೆಯಿಂದ ರಾತ್ರಿ 11ರ ವರೆಗೆ ಈ ಮಾರ್ಪಾಡು ಇರಲಿದೆ.
ಎಂ.ಚಿನ್ನಸ್ವಾಮಿ ಕ್ರೀಡಾಂಗಣದ ಸುತ್ತಮುತ್ತಲೂ ವಾಹನಗಳ ನಿಲುಗಡೆ ಸ್ಥಳದ ಕೊರತೆ ಇರುವುದರಿಂದ ಹಾಗೂ ಕ್ರೀಡಾಂಗಣ ಸುತ್ತಮುತ್ತ ಸಂಚಾರ ದಟ್ಟಣೆ ತಪ್ಪಿಸಲು ಕ್ರಿಕೆಟ್ ಪಂದ್ಯಗಳ ವೀಕ್ಷಣೆಗೆ ಬರುವ ಪ್ರೇಕ್ಷಕರು ಸಾಧ್ಯವಾದಷ್ಟು ಸಾರ್ವಜನಿಕ ಸಾರಿಗೆ (ಬಿಎಂಟಿಸಿ ಹಾಗೂ ಮೆಟ್ರೋ) ಸೇವೆಯನ್ನು ಬಳಸುವಂತೆ ಬೆಂಗಳೂರು ಸಂಚಾರ ಪೊಲೀಸರು ಕೋರಿದ್ದಾರೆ.