ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಹಾಗೂ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ತೆರೆಹಂಚಿಕೊಂಡಿರುವ ಇತ್ತೀಚಿನ ಆ್ಯಕ್ಷನ್ ಥ್ರಿಲ್ಲರ್ ‘ಸಿಕಂದರ್’ ಉತ್ತಮ ಪ್ರದರ್ಶನ ಮುಂದುವರಿಸಿದೆಯಾದರೂ, ನಿರೀಕ್ಷೆ ಬಹಳ ದೊಡ್ಡ ಮಟ್ಟದಲ್ಲಿತ್ತು. ಎ.ಆರ್.ಮುರುಗದಾಸ್ ಆ್ಯಕ್ಷನ್ ಕಟ್ ಹೇಳಿರುವ ಬಹುನಿರೀಕ್ಷಿತ ಚಿತ್ರ, ಈದ್ ಉಡುಗೊರೆಯಾಗಿ, ಮಾರ್ಚ್ 30ರಂದು ಪ್ರಪಂಚದಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಯಿತು.
ಚಿತ್ರದಲ್ಲಿ ಕಾಜಲ್ ಅಗರ್ವಾಲ್, ಸತ್ಯರಾಜ್, ಮತ್ತು ಶರ್ಮನ್ ಜೋಶಿ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಮಾತ್ರವಲ್ಲದೇ, ನಿರ್ದೇಶಕ ಎ.ಆರ್.ಮುರುಗದಾಸ್ ಅವರೊಂದಿಗೂ ‘ಸಿಕಂದರ್’ ಸಲ್ಮಾನ್ ಖಾನ್ ಅವರ ಮೊದಲ ಸಿನಿಮಾ ಇದಾಗಿದೆ. ಬಹುಬೇಡಿಕೆ ತಾರೆಯರು ಚಿತ್ರದಲ್ಲಿ ಬಣ್ಣ ಹಚ್ಚಿರುವ ಹಿನ್ನೆಲೆ, ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಂಡಿದ್ದರು.
ನಾಡಿಯಾಡ್ವಾಲಾ ಗ್ರ್ಯಾಂಡ್ಸನ್ ಎಂಟರ್ಟೈನ್ಮೆಂಟ್ ಬ್ಯಾನರ್ ಅಡಿ, ಸಾಜಿದ್ ನಾಡಿಯಾಡ್ವಾಲಾ ನಿರ್ಮಿಸಿದ ‘ಸಿಕಂದರ್’ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸಲಿದೆ ಎಂದು ನಿರೀಕ್ಷಿಸಲಾಗಿತ್ತು. ರಜೆ ದಿನ ಭಾನುವಾರ ಬಿಡುಗಡೆಯಾದರೂ ಸಿನಿಮಾ ಬಹಳ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿಲ್ಲ. ಕಲೆಕ್ಷನ್ ಉತ್ತಮ ಎನ್ನಬಹುದು ಹೊರತು ಸಿನಿಪಂಡಿತರು ನಿರೀಕ್ಷಿಸಿದ ಅಂಕಿಅಂಶವನ್ನು ತಲುಪಿಲ್ಲ. ಮೊದಲ ದಿನವೇ ಸುಮಾರು 45 ಕೋಟಿ ರೂ. ಗಳಿಸಲಿದೆ ಎಂದು ಅಂದಾಜಿಸಲಾಗಿತ್ತು.
ಎರಡನೇ ದಿನದ ಸಿಕಂದರ್ ಕಲೆಕ್ಷನ್: ಬಹುನಿರೀಕ್ಷಿತ ಚಿತ್ರ ತನ್ನ ಮೊದಲ ಸೋಮವಾರ, ಈದ್ ಹಬ್ಬದಂದು 29 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಸಿನಿಮಾ ತನ್ನ ಮೊದಲ ದಿನ, ಭಾನುವಾರದಂದು 26 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು. ಎರಡನೇ ದಿನ ಗಳಿಕೆಯಲ್ಲಿ ಏರಿಕೆಯಾಗಿದೆ. 2 ದಿನಗಳಲ್ಲಿ ದೇಶೀಯ ಮಾರುಕಟ್ಟೆಯ ವ್ಯವಹಾರ 55 ಕೋಟಿ ರೂಪಾಯಿ ಆಗಿದೆ. ಸೋಮವಾರದಂದು ಪ್ರೇಕ್ಷಕರ ಸಂಖ್ಯೆ ಹೆಚ್ಚಿತ್ತು. ಇನ್ನೂ, ಚಿತ್ರದ ನಿರ್ಮಾಪಕರ ಪ್ರಕಾರ, ಸಿಕಂದರ್ ತನ್ನ ಮೊದಲ ದಿನ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 19.25 ಕೋಟಿ ರೂ. ಸಂಗ್ರಹಿಸಿದೆ.