ಅಹಮದಾಬಾದ್ (ಗುಜರಾತ್): ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ರಾಷ್ಟ್ರೀಯ ಸಮ್ಮೇಳನ ಇದೇ ಏಪ್ರಿಲ್ 8- 9ರಂದು ಅಹಮದಾಬಾದ್ನಲ್ಲಿ ಆಯೋಜನೆಗೊಂಡಿದ್ದು, 64 ವರ್ಷಗಳ ಬಳಿಕ ಗುಜರಾತ್ನಲ್ಲಿ ಈ ಸಮ್ಮೇಳನ ನಡೆಯುತ್ತಿರುವುದು ವಿಶೇಷವಾಗಿದೆ.
ಇಲ್ಲಿನ ಸಬರಮತಿ ನದಿ ದಂಡೆಯ ಮೇಲೆ ನಡೆಯುವ ಪಕ್ಷದ ಉನ್ನತ ಮಟ್ಟದ ಈ ಸಭೆಯಲ್ಲಿ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಹಿರಿಯ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಮತ್ತು ಪಕ್ಷದ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಸೇರಿದಂತೆ ಸುಮಾರು 3,000 ಕಾಂಗ್ರೆಸ್ ನಾಯಕರು ಭಾಗಿಯಾಗಲಿದ್ದಾರೆ.
ಈ ಹಿಂದೆ 1961ರಲ್ಲಿ ಗುಜರಾತ್ನ ಭಾವನಗರದಲ್ಲಿ ಎಐಸಿಸಿ ರಾಷ್ಟ್ರೀಯ ಸಭೆ ನಡೆದಿತ್ತು. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಇದೊಂದು ರಾಜಕೀಯ ಪುಷ್ಟಿ ನೀಡುವ ಕಾರ್ಯಕ್ರಮವಾಗಿತ್ತು.
ಈ ಬಾರಿಯ ಸಭೆಯಲ್ಲಿ ಪ್ರಮುಖ ರಾಜಕೀಯ ಚರ್ಚೆಗಳು ಮತ್ತು ಕಾರ್ಯತಂತ್ರದ ಯೋಜನೆಗಳ ಕುರಿತು ಚರ್ಚಿಸಲಾಗುವುದು. ಎರಡು ದಿನಗಳ ಕಾಲ ನಡೆಯಲಿರುವ ಈ ಸಭೆಯಲ್ಲಿ ಈಗಾಗಲೇ ಸಕಲ ವ್ಯವಸ್ಥೆ ನಡೆಸಲಾಗಿದ್ದು, ಅಹಮದಾಬಾದ್ ಮತ್ತು ಹತ್ತಿರದ ಪ್ರದೇಶಗಳಲ್ಲಿ ಸುಮಾರು 2,000 ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ. ಐಟಿಸಿ ನರ್ಮದಾ ಮತ್ತು ಕೋರ್ಟ್ಯಾರ್ಡ್ ಮ್ಯಾರಿಯಟ್ ಸೇರಿದಂತೆ ಪ್ರಮುಖ ಹೋಟೆಲ್‌ಗಳನ್ನು ಸಂಪೂರ್ಣವಾಗಿ ಕಾಯ್ದಿರಿಸಲಾಗಿದೆ.
ಇದೇ ವೇಳೆ ಮತ್ತೊಂದು ಐಷಾರಾಮಿ ಹೋಟೆಲ್ ಹಯಾತ್, ದಿ ಫರ್ನ್, ಫಾರ್ಚೂನ್ ಲ್ಯಾಂಡ್ಮಾರ್ಕ್, ಲೆಮನ್ ಟ್ರೀ, ರಿವೆರಾ ಮತ್ತು ರಾಡಿಸನ್ ಬ್ಲೂಗಳು ಕೂಡ ನಿಯೋಗಕ್ಕಾಗಿ ಭರ್ತಿಯಾಗಿವೆ. ಜೊತೆಗೆ ಹೋಟೆಲ್ನಿಂದ ಸಭೆ ನಡೆಯುವ ಸ್ಥಳಗಳಿಗೆ ಸಾರಿಗೆ ಸೇರಿದಂತೆ ಇನ್ನಿತರ ವ್ಯವಸ್ಥೆಗಳನ್ನು ಮಾಡಿಕೊಳ್ಳಲಾಗ್ತಿದೆ. ಕಾರ್ ಮತ್ತು ಬಸ್ ಜೊತೆಯಲ್ಲಿ ಪಕ್ಷದ ಕಾರ್ಯಕರ್ತರಿಗೆ ಅನುಗುಣವಾಗಿ ಹೆಚ್ಚುವರಿ ಸೌಲಭ್ಯವನ್ನು ಮಾಡಲಾಗುತ್ತಿದೆ. ಇದರ ಎಲ್ಲಾ ಪರಿಣಾಮವಾಗಿ ಹೋಟೆಲ್ಗಳಲ್ಲಿ ಬೇಡಿಕೆ ಹೆಚ್ಚಿದ್ದು, ದರಗಳು ಗಗನಮುಖಿಯಾಗಿವೆ.