ಹಾವೇರಿ: ಗಾಂಧಿಪುರ ಬಳಿಯ ಸರ್ಕಾರಿ ಪ್ರಥಮ ದರ್ಜಿ ಕಾಲೇಜಿನಲ್ಲಿ ಗುರುವಾರ ಜಾನಪದ ಉತ್ಸವ ಆಚರಿಸಲಾಯಿತು. ಕಾಲೇಜಿಗೆ ಸಂಪೂರ್ಣ ಜಾನಪದ ಸೊಗಡಿನ ಟಚ್ ನೀಡಲಾಗಿತ್ತು. ಕಾರ್ಯಕ್ರಮಕ್ಕೆ ಆಗಮಿಸಿದ ಅತಿಥಿಗಳನ್ನು ವಿದ್ಯಾರ್ಥಿಗಳು ಜಾನಪದ ಸೊಗಡಿನ ವೇಷಭೂಷಣ ಧರಿಸಿ ಕುಂಭ ಹೊತ್ತು ಬರಮಾಡಿಕೊಂಡರು.
ಕಾಲೇಜು ಆವರಣದಲ್ಲಿ ಸ್ವರಸ್ವತಿ ಪೂಜೆ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಜಾನಪದ ಉತ್ಸವದ ಅಂಗವಾಗಿ ಕಾಲೇಜು ಕ್ಯಾಂಪಸ್‌ಗೆ ಚಕ್ಕಡಿ ತರಲಾಯಿತು. ಚಕ್ಕಡಿಗೆ ಬಣ್ಣ ಬಣ್ಣದ ಪರ್ಪರಿ ಅಲಂಕಾರ ಮಾಡಿ ವಿದ್ಯಾರ್ಥಿಗಳು ಸಿಂಗರಿಸಿದ್ದರು. ವಿದ್ಯಾರ್ಥಿ, ವಿದ್ಯಾರ್ಥಿನಿಯರ ಕೈಯ್ಯಲ್ಲಿ ಅರಳಿದ ರಂಗೋಲಿಗಳು ಕಾರ್ಯಕ್ರಮಕ್ಕೆ ಬರುವವರಿಗೆ ಸ್ವಾಗತ ಕೋರುತ್ತಿದ್ದವು. ತಳಿರು-ತೋರಣಗಳು ಜಾನಪದ ಉತ್ಸವದ ಸಂಭ್ರಮ ಹೆಚ್ಚಿಸಿದವು.
ಸೀರೆಯಲ್ಲಿ ಮಿಂಚಿದ ವಿದ್ಯಾರ್ಥಿನಿಯರು: ಜಾನಪದ ಉತ್ಸವದ ಅಂಗವಾಗಿ ವಿದ್ಯಾರ್ಥಿಗಳು ಬಿಳಿಯ ಪಂಚೆ ತೊಟ್ಟು, ಬಿಳಿಯ ಟವಲ್ ಹೆಗಲ ಮೇಲೆ ಹಾಕಿಕೊಂಡು ಗಮನ ಸೆಳೆದರೆ, ಮೊಳಕಾಲ್ಮುರ ಸೀರೆ, ಶಿಗ್ಲಿಸೀರೆ, ಇಳಕಲ್ ಸೀರೆ ಸೇರಿದಂತೆ ಪ್ರಾಚೀನ ಕಾಲದ ಸಂಪ್ರದಾಯಸ್ತ ಹೆಣ್ಣುಮಕ್ಕಳು ಧರಿಸುತ್ತಿದ್ದ ಸೀರೆಗಳನ್ನು ವಿದ್ಯಾರ್ಥಿನಿಯರು ತೊಟ್ಟು ಬಂದಿದ್ದರು. ಜೊತೆಗೆ ಕಾಲ್ಗೆಜ್ಜೆ, ಕಿವಿಯೋಲೆ, ಡಾಬು, ಮೊರಬಾಳ ಸರ, ಬೇವಿನಕಾಯಿಸರ, ಕೈತುಂಬ ಬಳೆ ಹಣೆಗೆ ವಿಭೂತಿ ಕುಂಕುಮ, ಮೂಗಿಗೆ ನತ್ತು ಹಾಕಿಕೊಂಡು ಬಂದು ಗಮನ ಸೆಳೆದರು. ಲಂಬಾಣಿ ವೇಷತೊಟ್ಟು ಬಂದ ವಿದ್ಯಾರ್ಥಿನಿಯರು ಕಾರ್ಯಕ್ರಮದ ಆಕರ್ಷಣೆಯಾದರು.
ವಿದ್ಯಾರ್ಥಿಗಳಿಗಿಂತ ತಾವೇನು ಕಡಿಮೆ ಎಂದು ಕಾಲೇಜು ಸಿಬ್ಬಂದಿಯೂ ಸಹ ಸಾಂಪ್ರದಾಯಿಕ ಉಡುಪು ಧರಿಸಿದ್ದರು. ಉಪನ್ಯಾಸಕರು ಪಂಚೆ ಧೋತರ ಶಾಲು ಹಾಕಿಕೊಂಡು ಬಂದಿದ್ದರೆ, ಉಪನ್ಯಾಸಕಿಯರು, ಮಹಿಳಾ ಸಿಬ್ಬಂದಿ ಟೋಪು ಸೆರಗಿನ ಸೀರೆ ತೊಟ್ಟು ಮಿಂಚಿದರು. ಕಾಲೇಜು ಕ್ಯಾಂಪಸ್ ತುಂಬಾ ಗ್ರಾಮೀಣ ಸೊಗಡಿನ ಸಂಭ್ರಮ ಮನೆಮಾಡಿತ್ತು. ವಿದ್ಯಾರ್ಥಿನಿಯರು ಗುಂಪು ಗುಂಪಾಗಿ ನಿಂತು ಮೊಬೈಲ್‌ಗಳಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.