ಬೆಳಗಾವಿ : ಕರ್ನಾಟಕ ರಾಜ್ಯಪಾಲರು ಹೆಸರಿನಲ್ಲಿದ್ದ ಸುಮಾರು 5 ಎಕರೆ ಜಮೀನನ್ನು ಭೂಗಳ್ಳರ ಪಾಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಬೆಳಗಾವಿಯ ಬೈಲಹೊಂಗಲ ತಾಲೂಕಿನಲ್ಲಿ ಬಡ ಜನರಿಗೆ ನಿವೇಶನ ಹಂಚಲು ಸರ್ಕಾರವು ಖರೀದಿಸಿದ್ದ 5 ಎಕರೆ ಜಮೀನು ಇದೀಗ ಭೂಗಳ್ಳರ ಪಾಲಾಗಿದ್ದು, ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ರೆಜಿಸ್ಟರ್ ಮಾಡಿಕೊಳ್ಳಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮಲ್ಲಮ್ಮನ ಬೆಳವಡಿಯಲ್ಲಿರುವ ಸರ್ವೇ ನಂ.221/1ಬ 19 ಎಕರೆ 30 ಗುಂಟೆ ಸಾಗುವಳಿ ಜಮೀನಿನ ಪೈಕಿ 6 ಎಕರೆ ಜಮೀನನ್ನು 2002ರಲ್ಲಿ ಖರೀದಿಸಿ, ಜಮೀನನ್ನು ಬಡ ಜನರಿಗೆ ಹಂಚುವ ಉದ್ದೇಶದಲ್ಲಿ ಸರ್ಕಾರವೂ ರಾಜ್ಯಪಾಲರ ಹೆಸರಿನಲ್ಲಿ ನೋಂದಣಿ ಮಾಡಲಾಗಿತ್ತು.
ಆದರೆ, ಕೆಲ ವರ್ಷಗಳ ಹಿಂದೆ ಇದೇ ಸರ್ವೇ ನಂಬರ್ ನ ಜಮೀನಿನ ಪಹಣಿ ಪತ್ರ ಸರಿ ಪಡಿಸುವ ಹೆಸರಿನಲ್ಲಿ 6 ಎಕರೆ ಜಮೀನಿನಲ್ಲಿ 35 ಗುಂಟೆ ಜಾಗವನ್ನು ಮಾತ್ರ ಬಿಟ್ಟು ಉಳಿದ ಎಲ್ಲಾ ಜಮೀನನ್ನು ಅಕ್ರಮವಾಗಿ ಖಾಸಗಿ ವ್ಯಕ್ತಿಗಳ ಹೆಸರಿಗೆ ರಿಜಿಸ್ಟರ್ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಲಾಗಿದೆ.
ಇನ್ನು ಈ ಪ್ರಕರಣದಲ್ಲಿ ಅಂದಿನ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಮತ್ತು ಬೈಲಹೊಂಗಲ ಎಸಿ ಪ್ರಭಾವತಿಯವರ ಕೈವಾಡ ಇದೆ ಎನ್ನಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.