ನಾಂದೇಡ್(ಮಹಾರಾಷ್ಟ್ರ): ಮಹಿಳಾ ಕಾರ್ಮಿಕರನ್ನು ಕರೆದೊಯ್ಯುತ್ತಿದ್ದ ಟ್ರ್ಯಾಕ್ಟರ್ ಬಾವಿಗೆ ಬಿದ್ದು ಎಂಟು ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ನಾಂದೇಡ್‌ನ ಅಲೆಗಾಂವ್ ಎಂಬಲ್ಲಿ ಇಂದು ನಡೆಯಿತು.
ತಾರಾಬಾಯಿ ಜಾಧವ್, ಧ್ರುಪತಾ ಜಾಧವ್, ಮೀನಾ ರಾವುತ್, ಜ್ಯೋತಿ ಸರೋದೆ, ಚೌತ್ರಾಬಾಯಿ ಪಾರ್ಧೆ, ಸರಸ್ವತಿ ಭೂರಾದ್ ಮತ್ತು ಸಿಮ್ರಾನ್ ಕಾಂಬಳೆ ಎಂಬವರು ಮೃತಪಟ್ಟಿದ್ದಾರೆ. ಟ್ರ್ಯಾಕ್ಟರ್‌ನಲ್ಲಿ ಒಟ್ಟು 12 ಮಂದಿ ಸಂಚರಿಸುತ್ತಿದ್ದರು ಎಂಬ ಮಾಹಿತಿ ಇದೆ.
ಪೊಲೀಸರು ನೀಡಿದ ಮಾಹಿತಿ ಪ್ರಕಾರ, ಟ್ರ್ಯಾಕ್ಟರ್ನಲ್ಲಿದ್ದವರು ಹಿಂಗೋಲಿಯ ವಾಸ್ಮತ್ ತಾಲೂಕಿನ ಗುಂಜ್ ಗ್ರಾಮದ ಮಹಿಳಾ ಕಾರ್ಮಿಕರು. ಇವರು ಅರಿಶಿನ ಕೊಯ್ಲುಗೆಂದು ಹೋಗುತ್ತಿದ್ದರು. ಈ ವೇಳೆ ಅಲೆಗಾಂವ್ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್ ಬಾವಿಗೆ ಉರುಳಿ ಬಿದ್ದಿದೆ.
ಟ್ರ್ಯಾಕ್ಟರ್ ಬಾವಿಗೆ ಬಿದ್ದ ವಿಷಯ ತಿಳಿಯುತ್ತಿದಂತೆ ಗ್ರಾಮಸ್ಥರು ಘಟನಾ ಸ್ಥಳಕ್ಕೆ ಧಾವಿಸಿ ಪುರುಭಾಬಾಯಿ ಕಾಂಬಳೆ, ಪಾರ್ವತಿ ಬುರಾದ್ ಮತ್ತು ಸತ್ವಜಿ ಜಾಧವ್ ಎಂಬವರನ್ನು ರಕ್ಷಿಸಿದ್ದಾರೆ.