ಪಾದಗಳನ್ನು ಸ್ನಾನ ಮಾಡುವಾಗ ಅಥವಾ ಪೆಡಿಕ್ಯೂರ್ ಮಾಡಿಸಿಕೊಳ್ಳುವಾಗ ಮಾತ್ರವಲ್ಲ ಪ್ರತಿನಿತ್ಯ ಗಮನಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ಪಾದಗಳು ನಮ್ಮ ದೇಹದಲ್ಲಿ ಆಗುವಂತಹ ಅನೇಕ ರೀತಿಯ ಬದಲಾವಣೆಗಳನ್ನು ತೋರಿಸುತ್ತದೆ. ಪಾದ ಪದೇ ಪದೇ ಊದಿಕೊಳ್ಳಲು, ಸುಡುವಂತಾಗಲು, ಉರಿಯುವುದಕ್ಕೆ ಕೆಲವು ಕಾರಣಗಳಿವೆ. ಈ ಮುನ್ಸೂಚನೆ ಕೆಲವು ಕಾಯಿಲೆಗಳ ಆರಂಭಿಕ ಲಕ್ಷಣಗಳಾಗಿರಬಹುದು ಅಥವಾ ದೇಹದಲ್ಲಿ ಕೆಲವು ಅಂಶಗಳ ಕೊರತೆಯಾಗಿರಬಹುದು. ಹಾಗಾಗಿ, ಯಾವ ರೀತಿ ಪಾದಗಳು ಇರಬಾರದು? ಪಾದಗಳು ನೀಡುವ ಮುನ್ಸೂಚನೆ ಹೇಗಿರುತ್ತದೆ ಎಂಬುದರ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ.
ನಮ್ಮ ಮುಖ (Face) ಸುಂದರವಾಗಿ ಕಾಣಲು ನಾವು ನಾನಾ ರೀತಿಯ ಕಸರತ್ತುಗಳನ್ನು ಮಾಡುತ್ತೇವೆ. ಆದರೆ ಮುಖದಷ್ಟೇ ನಮ್ಮ ಇತರ ಅಂಗಗಳು ಕೂಡ ಬಹಳ ಮುಖ್ಯವಾಗುತ್ತದೆ ಎಂಬುದನ್ನು ನಾವು ಹಲವು ಬಾರಿ ಮರೆಯುತ್ತೇವೆ. ಮುಖವನ್ನು ಕನ್ನಡಿಯಲ್ಲಿ ನೋಡಿಕೊಂಡು ಖುಷಿ ಪಡುತ್ತೇವೆ. ಅದು ತಪ್ಪಲ್ಲ, ಆದರೆ ನಿಮ್ಮ ಕೈ, ಕಾಲು, ಎದೆಯ ಭಾಗ, ಬೆನ್ನು, ಕುತ್ತಿಗೆ ಭಾಗಗಳನ್ನು ದಿನದಲ್ಲಿ ಒಂದು ಬಾರಿಯಾದರೂ ಗಮನಿಸಬೇಕು. ಜೊತೆಗೆ ಅವುಗಳಲ್ಲಿ ಯಾವುದಾದರೂ ಬದಲಾವಣೆಗಳಾಗುತ್ತಿವೆಯೇ ಎಂಬುದನ್ನು ಗಮನಿಸಬೇಕು ಆಗ ಮಾತ್ರ ನಿಮ್ಮ ದೇಹದಲ್ಲಿ ಆರಂಭವಾಗುವ ಸಮಸ್ಯೆಗಳನ್ನು ನೀವು ತಡೆಯಲು ಸಾಧ್ಯ. ಅದೇ ರೀತಿ ನಿಮ್ಮ ಪಾದ (Foot) ಗಳನ್ನು ಸ್ನಾನ ಮಾಡುವಾಗ ಅಥವಾ ಪೆಡಿಕ್ಯೂರ್ (Pedicure) ಮಾಡಿಸಿಕೊಳ್ಳುವಾಗ ಮಾತ್ರವಲ್ಲ ಪ್ರತಿನಿತ್ಯ ಗಮನಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಏಕೆಂದರೆ ನಮ್ಮ ಪಾದಗಳು ಪೂರ್ತಿ ದೇಹದ ತೂಕವನ್ನು ಹೊರುವುದರಿಂದ, ಇದರ ಆರೋಗ್ಯವೂ ಕೂಡ ಬಹಳ ಮುಖ್ಯವಾಗಿರುತ್ತದೆ.
ಸಾಮಾನ್ಯವಾಗಿ ಇದು ರಕ್ತಪರಿಚಲನೆಯ ಸಮಸ್ಯೆಗಳಿಂದ ಹಿಡಿದು ನರಗಳ ಹಾನಿಯವರೆಗೆ ಬಹಳಷ್ಟು ಕಾಯಿಲೆಗಳ ಬರುವಿಕೆಯ ಮುನ್ಸೂಚನೆ ನೀಡಬಹುದು. ನಿಮ್ಮ ದೇಹದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದನ್ನು ಪಾದಗಳು ನೀಡುವ ಕೆಲವು ಲಕ್ಷಣಗಳ ಮೂಲಕ ತಿಳಿಯಬಹುದು. ಹಾಗಾದರೆ ಪಾದಗಳು ನೀಡುವ ಮುನ್ಸೂಚನೆ ಹೇಗಿರುತ್ತದೆ? ಪಾದಗಳು ಪದೇ ಪದೇ ಊದಿಕೊಳ್ಳುತ್ತಿದ್ದರೆ ಅಥವಾ ಉರಿಯುತ್ತಿದರೆ ಅದರ ಅರ್ಥವೇನು ತಿಳಿದುಕೊಳ್ಳಿ.
ಅಗಲವಾದ ಹೆಜ್ಜೆ ಇಡುವುದು: ಕೆಲವರು ಪಾದಗಳನ್ನು ಎಳೆದು ಅಥವಾ ಅಗಲವಾದ ಹೆಜ್ಜೆಗಳನ್ನು ಇಡುತ್ತಾ ನಡೆಯುತ್ತಾರೆ. ಈ ರೀತಿ ಇದ್ದಕ್ಕಿದ್ದಂತೆ ಆಗುವಂತಹ ಬದಲಾವಣೆ ನಿಮ್ಮ ಗಮನಕ್ಕೂ ಬರಬಹುದು. ಆದರೆ ಈ ರೀತಿ ಒಮ್ಮೆಲೇ ಆದರೆ ಅದು ನರ ಹಾನಿಯನ್ನು ಸೂಚಿಸುತ್ತದೆ. ಇದು ಸಾಮಾನ್ಯವಾಗಿ ಬಾಹ್ಯ ನರರೋಗದಿಂದ ಉಂಟಾಗುತ್ತದೆ. ಸುಮಾರು 30% ನರರೋಗ ಪ್ರಕರಣಗಳು ಮಧುಮೇಹಕ್ಕೆ ಸಂಬಂಧಿಸಿರುತ್ತವೆ. ಆದರೆ ಕೆಲವೊಮ್ಮೆ ಸೋಂಕುಗಳು, ವಿಟಮಿನ್ ಕೊರತೆ ಅಥವಾ ಅತಿಯಾದ ಆಲ್ಕೋಹಾಲ್ ಸೇವನೆಯಿಂದಲೂ ಈ ರೀತಿ ಆಗಬಹುದು. ಕೆಲವು ಸಂದರ್ಭಗಳಲ್ಲಿ, ಇದು ಮೆದುಳು, ಬೆನ್ನುಹುರಿ ಅಥವಾ ಸ್ನಾಯುಗಳೊಂದಿಗಿನ ಸಮಸ್ಯೆಗಳನ್ನು ಸಹ ಸೂಚಿಸಬಹುದು. ಹಾಗಾಗಿ ನಿರಂತರವಾಗಿ ಈ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದರೆ ಮೊದಲು ವೈದ್ಯರ ಬಳಿ ಪರೀಕ್ಷಿಸಿಕೊಳ್ಳಿ.
ಪಾದಗಳು ಊದಿಕೊಳ್ಳುವುದು: ಕೆಲವರಿಗೆ ಪಾದಗಳು ಬಲೂನ್ ನಂತೆ ಊದಿಕೊಳ್ಳುತ್ತದೆ. ಇದು ಕೆಲವರ ಅನುಭವಕ್ಕೆ ಬಂದಿರಬಹುದು. ಬಹಳ ಸಮಯ ನಿಂತುಕೊಂಡಾಗ ಅಥವಾ ಒಂದೇ ಕಡೆ ಕುಳಿತುಕೊಂಡಿದ್ದರೆ ಅಥವಾ ಗರ್ಭಾವಸ್ಥೆಯಲ್ಲಿ ಅಥವಾ ಎತ್ತರದ ಚಪ್ಪಲಿಗಳನ್ನು ಧರಿಸಿವುದರಿಂದ ಪಾದಗಳಲ್ಲಿ ತಾತ್ಕಾಲಿಕ ಊತ ಕಂಡುಬರುವುದು ಸಾಮಾನ್ಯವಾಗಿದೆ. ಆದರೆ ನಿರಂತರವಾಗಿ ಊತ ಕಂಡುಬರುತ್ತಿದ್ದರೆ ಅದು ರಕ್ತಪರಿಚಲನೆಯಲ್ಲಿ ತೊಂದರೆ, ರಕ್ತ ಹೆಪ್ಪುಗಟ್ಟುವಿಕೆ, ಮೂತ್ರಪಿಂಡದ ಸಮಸ್ಯೆ ಅಥವಾ ಹೃದ್ರೋಗದಂತಹ ಗಂಭೀರ ಆರೋಗ್ಯ ಪರಿಸ್ಥಿತಿಗಳು ಬರುವ ಮುನ್ಸೂಚನೆ ಆಗಿರಬಹುದು. ಕೆಲವೊಮ್ಮೆ ನಿಷ್ಕ್ರಿಯ ಥೈರಾಯ್ಡ್ ಅಥವಾ ದುಗ್ಧರಸ ವ್ಯವಸ್ಥೆಯ ಸಮಸ್ಯೆಗಳು ಸಹ ಊತಕ್ಕೆ ಕಾರಣವಾಗಬಹುದು. ಅಷ್ಟೇ ಅಲ್ಲ, ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯದಿದ್ದರೂ ಕೂಡ ಪಾದಗಳಲ್ಲಿ ಊತ ಕಂಡುಬರಬಹುದು.
ಪಾದಗಳು ಉರಿಯುವುದು: ನಿಮ್ಮ ಪಾದಗಳು ಪದೇ ಪದೇ ಬಿಸಿಯಾಗಿ ಉರಿಯುತ್ತಿದ್ದರೆ ಅಥವಾ ಸುಡುವ ಭಾವನೆ ಉಂಟಾಗುತ್ತಿದ್ದರೆ ಸಾಮಾನ್ಯವಾಗಿ ಇವು ಡಯಾಬಿಟಿಕ್ ಲಕ್ಷಣವಾಗಿರಬಹುದು. ಇನ್ನು ಕೆಲವು ಬಾರಿ ವಿಟಮಿನ್ ಬಿ ಕೊರತೆ, ಶಿಲೀಂಧ್ರ ಸೋಂಕು, ದೀರ್ಘಕಾಲದ ಮೂತ್ರಪಿಂಡದ ಕಾಯಿಲೆ, ಕಳಪೆ ರಕ್ತದ ಹರಿವು ಅಥವಾ ಹೈಪೋಥೈರಾಯ್ಡಿಸಮ್ ಇವೆಲ್ಲವೂ ಈ ರೀತಿಯ ಸಂವೇದನೆಗೆ ಕಾರಣವಾಗಬಹುದು.
ಇನ್ನು ಕೆಲವರಲ್ಲಿ ಪಾದಗಳಲ್ಲಿ ತುರಿಕೆ ಅಥವಾ ಪದೇ ಪದೇ ಬೆವರುವುದು ಈ ರೀತಿಯ ಸಮಸ್ಯೆ ಕಂಡುಬರಬಹುದು ಇದು ವಿಟಮಿನ್ ಕೊರತೆಯಾಗಿರಬಹುದು ಅಥವಾ ಬೇರೆ ಕಾಯಿಲೆಗಳ ಬರುವಿಕೆಯ ಮುನ್ಸೂಚನೆ ಆಗಿರಬಹುದು. ಇನ್ನು ಹಲವರಲ್ಲಿ ಪಾದಗಳಲ್ಲಿ ಹುಣ್ಣುಗಳು ಉಂಟಾಗಿ, ಎಷ್ಟು ಸಮಯವಾದರೂ ಅದು ಗುಣವಾಗದಿರಬಹುದು. ಕೆಲವೊಮ್ಮೆ ಮಧುಮೇಹವು ಪಾದಗಳಲ್ಲಿ ರಕ್ತದ ಹರಿವು ಮತ್ತು ನರಗಳ ಕಾರ್ಯವನ್ನು ದುರ್ಬಲಗೊಳಿಸುತ್ತದೆ, ಸಣ್ಣ ಗುಳ್ಳೆಗಳು ಸಹ ಸೋಂಕಿಗೆ ಒಳಗಾಗುತ್ತವೆ ಮತ್ತು ನಿಧಾನವಾಗಿ ಗುಣವಾಗುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕೂಡ ಪ್ರತಿದಿನ ತಮ್ಮ ಪಾದಗಳನ್ನು ಪರೀಕ್ಷಿಸಬೇಕು ಮತ್ತು ಸಮಸ್ಯೆಗಳನ್ನು ತಡೆಗಟ್ಟಲು ಅವುಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು. ಯಾವುದೇ ರೀತಿಯ ಬದಲಾವಣೆಗಳು ಕಂಡುಬಂದಲ್ಲಿ ಮೊದಲು ವೈದ್ಯರನ್ನು ಸಂಪರ್ಕಿಸಬೇಕು.