ಗ್ಲ್ಯಾಮರ್ ಹಾಗೂ ಬೋಲ್ಡ್ ಪಾತ್ರಗಳಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಸ್ಟಾರ್ಡಮ್ ಹೊಂದಿರುವ ನಟಿ ರಾಗಿಣಿ ದ್ವಿವೇದಿ ಅವರೀಗ ನವಗ್ರಹ ಖ್ಯಾತಿಯ ಧರ್ಮ ಕೀರ್ತಿರಾಜ್ ಜೊತೆ ಸಿನಿಮಾವೊಂದರಲ್ಲಿ ನಟಿಸಲು ಸಜ್ಜಾಗಿದ್ದಾರೆ. ‘ಸಿಂಧೂರಿ’ ಶೀರ್ಷಿಕೆಯ ಚಿತ್ರದ ಮುಹೂರ್ತ ಸಮಾರಂಭ ಬೆಂಗಳೂರಿನ ಬನಶಂಕರಿ ದೇವಸ್ಥಾನದಲ್ಲಿ ಅಕ್ಷಯ ತೃತೀಯದ ಶುಭದಿನದಂದು ಅದ್ದೂರಿಯಾಗಿ ನೆರವೇರಿತು. ಚಿತ್ರತಂಡ ತಮ್ಮ ಚಿತ್ರದ ಮಾಹಿತಿ ಹಂಚಿಕೊಂಡಿದೆ.

ಮೊದಲು ಮಾತನಾಡಿದ ನಿರ್ದೇಶಕ ಶಂಕರ್ ಕೋನಮಾನಹಳ್ಳಿ, ”ಇದು ನನ್ನ ನಾಲ್ಕನೇ ಚಿತ್ರ. ಶೀರ್ಷಿಕೆ ಕೇಳಿದರೆ, ರೋಹಿಣಿ ಸಿಂಧೂರಿ ಮತ್ತು ಡಿ.ಕೆ.ರವಿ ಅವರ ಕಥೆಯಾ? ಎಂದು ಹಲವರು ಕೇಳಿದ್ದಾರೆ. ಆದರೆ ರೋಹಿಣಿ ಸಿಂಧೂರಿ ಅವರಿಗೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ. ಇದೊಂದು ಕಾಲ್ಪನಿಕ ಕಥೆ. ಇದೊಂದು ಮರ್ಡರ್ ಮಿಸ್ಟ್ರಿ. ಇಲ್ಲಿ ರಾಗಿಣಿ ಮತ್ತು ಧರ್ಮ ಜೋಡಿಯಾಗಿ ನಟಿಸುತ್ತಿಲ್ಲ. ರಾಗಿಣಿ ಅವರು ಕಥೆಗೆ ಟರ್ನಿಂಗ್ ಪಾಯಿಂಟ್ ನೀಡುವ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ” ಎಂದು ಸ್ಪಷ್ಟಪಡಿಸಿದರು.
”ನಾನು ಬಿಂಗೋ ಚಿತ್ರದ ಚಿತ್ರೀಕರಣ ಮಾಡುವಾಗ, ರಾಗಿಣಿ ಅವರಿಗೆ ನನ್ನ ಕೆಲಸ ಇಷ್ಟವಾಗಿ, ಜೊತೆಯಾಗಿ ಇನ್ನೊಂದು ಸಿನಿಮಾ ಮಾಡೋಣ ಎಂದರು. ಆ ಸಂದರ್ಭದಲ್ಲಿ ಒಂದು ಕಥೆ ಹೇಳಿದೆ. ಅವರಿಗೆ ಇಷ್ಟವಾಗಿ ಈ ಚಿತ್ರ ಮಾಡೋಣ ಅಂದರು. ಚಿತ್ರಕಥೆ ಬರೆದೆ, ನಿರ್ಮಾಪಕರಿಗೂ ಓಕೆ ಆಯಿತು. ಇಂದು ಚಿತ್ರ ಪ್ರಾರಂಭವಾಗಿದೆ. ಸಾಮಾನ್ಯವಾಗಿ ಧರ್ಮ ಅವರು ಚಾಕೊಲೋಟ್ ಬಾಯ್ ಆಗಿ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆದರೆ, ಈ ಚಿತ್ರದಲ್ಲಿ ಅವರದ್ದು ವಿರುದ್ಧ ಪಾತ್ರ. ಸಾಕಷ್ಟು ತಯಾರಿ ನಡೆಸುತ್ತಿದ್ದಾರೆ. ಚಿತ್ರದ ನಾಯಕಿ ಹಾಗೂ ಉಳಿದ ತಾರಾಬಳಗದ ಬಗ್ಗೆ ಸದ್ಯದಲ್ಲೇ ಮಾಹಿತಿ ನೀಡುತ್ತೇವೆ” ಎಂದರು.




