ಹಾವೇರಿ : ಬಸ್ ನಿಲ್ಲಿಸಿ ನಮಾಜ್ ಮಾಡಿದ್ದ ಸಾರಿಗೆ ಬಸ್ ಚಾಲಕನನ್ನು ಅಮಾನತು ಮಾಡಲಾಗಿದೆ. ಕಾರ್ಮಿಕರ ದಿನಾಚರಣೆಯಂದೇ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಶಿಸ್ತುಪಾಲನೆ ಅಧಿಕಾರಿಗಳು ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಹಾವೇರಿಯಲ್ಲಿ ರಸ್ತೆ ಮಧ್ಯ ‘NWKRTC’ (ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ) ಬಸ್ ನಿಲ್ಲಿಸಿ ಬಸ್ಸಲ್ಲೇ ಚಾಲಕ ನಮಾಜ್ ಮಾಡಿದ್ದು, ವೀಡಿಯೋ ವೈರಲ್ ಆಗಿದೆ.
ಮಂಗಳವಾರ ಸಂಜೆ ಈ ಘಟನೆ ನಡೆದಿದ್ದು, ಸಾರ್ವಜನಿಕರನ್ನು ಕೆರಳಿಸಿದೆ. ಪ್ರಯಾಣಿಕರಿಂದ ತುಂಬಿದ್ದ ಹುಬ್ಬಳ್ಳಿ-ಹಾವೇರಿ ನಡುವೆ ಪ್ರಯಾಣಿಸುತ್ತಿದ್ದ ಕೆಎಸ್‌ಆರ್ಟಿಸಿ ಬಸ್ಸನ್ನು ಇದ್ದಕ್ಕಿದ್ದಂತೆ ರಸ್ತೆಯ ಮಧ್ಯದಲ್ಲಿ ನಿಲ್ಲಿಸಲಾಯಿತು, , ಆದರೆ ಚಾಲಕ ರಸ್ತೆಯಲ್ಲಿಯೇ ಬಸ್ ನಿಲ್ಲಿಸಿ ನಮಾಜ್ ಮಾಡಲು ನಿರ್ಧರಿಸಿದ್ದಾನೆ. ಕಂಡಕ್ಟರ್ ಕೂಡ ಇದಕ್ಕೆ ವಿರೋಧ ವ್ಯಕ್ತಪಡಿಸದೇ ಆತ ಕೂಡ ಚಾಲಕನಿಗೆ ಬೆಂಬಲ ನೀಡಿದ್ದಾನೆ.
ಧಾರ್ಮಿಕ ಆಚರಣೆಯನ್ನು ಮಾಡಲು ಸಾರ್ವಜನಿಕ ಬಸ್ ಅನ್ನು ಮಧ್ಯದಲ್ಲಿ ನಿಲ್ಲಿಸುವುದು ಬೇಜವಾಬ್ದಾರಿಯುತ ಮಾತ್ರವಲ್ಲ, ಅದು ಸಂಪೂರ್ಣವಾಗಿ ಅಪಾಯಕಾರಿ ಎಂದು ಜನರು ಕಿಡಿಕಾರಿದ್ದಾರೆ.
ಡ್ರೈವರ್ ಕಂ ಕಂಡಕ್ಟರ್ ಆರ್ ಮುಲ್ಲಾ ಎಂಬುವವರು ನಮಾಜ್ ಮಾಡಿದ್ದು, ಪ್ರಯಾಣಿಕರು ಈ ದೃಶ್ಯವನ್ನು ಸೆರೆ ಹಿಡಿದು ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾರೆ. ಘಟನೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ಸಾರಿಗೆ ಅಧಿಕಾರಿಗಳಿಗೆ ಸಚಿವ ರಾಮಲಿಂಗಾ ರೆಡ್ಡಿ ಸೂಚನೆ ನೀಡಿದ್ದರು.




