ಹುಮನಾಬಾದ:12ನೇ ಶತಮಾನದಲ್ಲಿ ವಚನ ಸಾಹಿತ್ಯಕ್ಕೆ ದಲಿತ ವಚನಕಾರರು ನೀಡಿದ ಕೊಡುಗೆ ಅನನ್ಯವಾಗಿದೆ ಎಂದು ಬಸವಕಲ್ಯಾಣದ ಕಲ್ಯಾಣ ಮಹಾಮನೆ ಪೀಠದ ಪೀಠಾಧಿಪತಿ ಬಸವಪ್ರಭು ಸ್ವಾಮಿ ಹೇಳಿದರು.
ತಾಲೂಕಿನ ದುಬಲಗುಂಡಿ ಗ್ರಾಮದ ಮಾದರ ಚನ್ನಯ್ಯ ದೇವಸ್ಥಾನದಲ್ಲಿ ಬುಧವಾರ ನಡೆದ ಮಾದರ ಚನ್ನಯ್ಯನವರ ಮೂರ್ತಿ ಪ್ರತಿಷ್ಠಾಪನೆ ಹಾಗೂ ಧರ್ಮ ಸಭೆ ಉದ್ದೇಶಿಸಿ ಮಾತನಾಡಿದರು.

ವಚನಕಾರರಾ ಮಾದಾರ ಚನ್ನಯ್ಯ,ಡೋಹರ ಕಕ್ಕಯ್ಯ,ಸಮಗಾರ ಹರಳಯ್ಯ ಸೇರಿದಂತೆ ತಳ ಸಮುದಾಯದ ಬಹುತೇಕ ವಚನಕಾರರನ್ನು ಅನುಭವ ಮಂಟಪದಲ್ಲಿ ಪ್ರಾಮುಖ್ಯತೆ ನೀಡಿ ಅವರ ಅನುಭವನಗಳನ್ನು ವಚನಗಳ ರೂಪದಲ್ಲಿ ಕಟ್ಟಿಕೊಡುವಲ್ಲಿ ಬಸವಣ್ಣನವರು ಪ್ರಮುಖ ಪಾತ್ರ ವಹಿಸಿದ್ದರು.
ಸಮಾಜದಲ್ಲಿ ಎಲ್ಲರಿಗೂ ಸಮಾನ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದಾರೆ.ಹೀಗಾಗಿ ಮಹಾನ್ ಶರಣರ ವಚನಗಳ ಸಾರವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕು ಎಂದರು.
ಈ ಸಂದರ್ಭದಲ್ಲಿ ಹವಾ ಮಲ್ಲಿನಾಥ ಮಹಾರಾಜ, ಗ್ರಾಮ ಪಂಚಾಯತ ಅಧ್ಯಕ್ಷ ನಾಗರಾಜ ಭೋಜಗುಂಡಿ,ಸದಸ್ಯ ಜೈರಾಮ ಖಜೂರೆ,ತಾಲ್ಲೂಕು ಪಂಚಾಯತ ಮಾಜಿ ಸದಸ್ಯ ಪರಮೇಶ್ವರ ಕಾಳಮಂದರಗಿ,ಗುಂಡುರೆಡ್ಡಿ,ಸುಭಾಷ ಗಂಗಾ ಸೇರಿ ಅನೇಕರು ಇದ್ದರು.
ವರದಿ: ಸಜೀಶ ಲಂಬುನೋರ




