ಬೆಂಗಳೂರು: ಬೆಳಗಾವಿ ಅಧಿವೇಶನದಲ್ಲಿ ಕಾಂಗ್ರೆಸ್ ಪಕ್ಷದ ಶಾಸಕಿ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ಅವಹೇಳನಾಕಾರಿ ಪದ ಬಳಕೆ ಆರೋಪಕ್ಕೆ ಸಂಬಂಧಿಸಿದಂತೆ ಬಿಜೆಪಿ ಮುಖಂಡ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ವಿರುದ್ಧದ ಪ್ರಕರಣ ರದ್ದುಪಡಿಸಲು ಹೈಕೋರ್ಟ್ ನಿರಾಕರಿಸಿದೆ. ಈ ಆದೇಶದಿಂದಾಗಿ ಸಿ.ಟಿ. ರವಿ ಅವರಿಗೆ ಹಿನ್ನಡೆಯಾಗಿದ್ದು, ಇದೀಗ ಪ್ರಕರಣದ ವಿಚಾರಣೆ ಎದುರಿಸುವ ಅನಿವಾರ್ಯತೆ ಉಂಟಾಗಿದೆ.
ತಮ್ಮ ವಿರುದ್ಧ ದಾಖಲಾಗಿದ್ದ ಪ್ರಕರಣ ರದ್ದು ಕೋರಿ ಸಿ.ಟಿ.ರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಸದನದಲ್ಲಿ ಅರ್ಜಿದಾರ ರವಿ ಒಂದು ವೇಳೆ ಅವಹೇಳನಕಾರಿ ಪದ ಬಳಕೆ ಮಾಡಿದ್ದೇ ಆದಲ್ಲಿ ಮಹಿಳೆಯ ಘನತೆಗೆ ಧಕ್ಕೆ ತರುವಂತಾಗಿದೆ. ಅಲ್ಲದೆ, ಆ ರೀತಿಯ ಪದ ಬಳಕೆ ಮಾಡಿದ್ದೇ ಆದಲ್ಲಿ ಅದು ಸದನದಲ್ಲಿನ ಶಾಸಕರ ರಕ್ಷಣಾ ವ್ಯಾಪ್ತಿಗೆ ಬರುವುದಿಲ್ಲ ಎಂದು ನ್ಯಾಯಪೀಠ ತಿಳಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ. ಆದೇಶದ ವಿಸ್ತೃತ ಪ್ರತಿ ಇನ್ನಷ್ಟೇ ಲಭ್ಯವಾಗಬೇಕಾಗಿದೆ.
ಅರ್ಜಿ ವಿಚಾರಣೆ ವೇಳೆ ಸಿ.ಟಿ.ರವಿ ಪರವಾಗಿ ವಾದ ಮಂಡಿಸಿದ್ದ ವಕೀಲರು, ಸದನದಲ್ಲಿ ಸದಸ್ಯರಿಗೆ ಸಂಪೂರ್ಣವಾದ ವಿನಾಯಿತಿ ಇರುತ್ತದೆ. ಸದನದಲ್ಲಿ ನಡೆದ ವಿಚಾರವನ್ನು ಆಧರಿಸಿ ಕ್ರಿಮಿನಲ್ ಅಥವಾ ಸಿವಿಲ್ ಪ್ರಕರಣ ಹೂಡಲಾಗದು. ಈ ಸಂಬಂಧ ಸಭಾಪತಿ ಬಸವರಾಜ ಹೊರಟ್ಟಿ ಅವರಿಗೆ ದೂರು ನೀಡಲಾಗಿದ್ದು, ಅವರು ರೂಲಿಂಗ್ ನೀಡಿದ್ದಾರೆ. ಹೀಗಾಗಿ ಎಫ್‌ಐಆರ್ ದಾಖಲಿಸಲು ಅವಕಾಶವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಸದನ ನಡೆಯಲಿ, ನಡೆಯದಿರಲಿ, ಸದಸ್ಯರು ಭಾಗಿಯಾಗಲಿ ಭಾಗಿಯಾಗದಿರಲಿ ಅವರು ಸದನದಲ್ಲಿ ಮಾತನಾಡುವ ಎಲ್ಲ ಮಾತುಗಳಿಗೂ ರಕ್ಷಣೆ ಇರಲಿದೆ. ಅರ್ಜಿದಾರ ಸಿ.ಟಿ ರವಿ ಮತ್ತು ದೂರುದಾರರಾದ ಲಕ್ಷ್ಮಿ ಹೆಬ್ಬಾಳ್ಕರ್ ಸದನದ ಸದಸ್ಯರಾಗಿದ್ದಾರೆ. ಅವರ ಬಗ್ಗೆ ಅರ್ಜಿದಾರರಿಗೆ ಗೌರವ ಇದೆ ಎಂದು ನಾವದಗಿ ತಿಳಿಸಿದರು.




