ಥಾಣೆ(ಮಹಾರಾಷ್ಟ್ರ): ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎಂಬುದಕ್ಕೆ ಇವರು ಮತ್ತೊಂದು ನಿದರ್ಶನ. ನಿವೃತ್ತ ನೌಕಾಧಿಕಾರಿಯೊಬ್ಬರು ತಮ್ಮ 78ನೇ ವಯಸ್ಸಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆ ಪಾಸಾಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಅಷ್ಟೇ ಅಲ್ಲ, ಮುಂದೆ ವಕೀಲನಾಗುವ ಗುರಿ ಇಟ್ಟುಕೊಂಡಿದ್ದಾರೆ.
ಮಹಾರಾಷ್ಟ್ರದ ಮಿರಾಭಯಂದ್ರ ನಿವಾಸಿ ಗೋರಖನಾಥ್ ಮೋರೆ ಅವರು ತಮ್ಮ ಇಳಿವಯಸ್ಸಿನಲ್ಲಿ ಪಿಯುಸಿ ಪರೀಕ್ಷೆ ಬರೆದು ಶೇ.44.50 ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.
ಮಹಾರಾಷ್ಟ್ರದಲ್ಲಿ ಸೋಮವಾರ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದ್ದು, ಈ ನಿವೃತ್ತ ನೌಕಾ ಪಡೆಯ ಅಧಿಕಾರಿಯೂ ಸಂಭ್ರಮಿಸಿದರು. ಮೂಲತಃ ಜಲಗಾಂವ್ ಮೂಲದ ಗೋರಖನಾಥ್ ಮೋರೆ ಅವರು 1947ರಲ್ಲಿ ಜನಿಸಿದ್ದಾರೆ. 11ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದ ಇವರು ಬಳಿಕ ದೇಶ ಸೇವೆಯ ತುಡಿತದಿಂದ ನೌಕಾಪಡೆಗೆ ಸೇರಿದ್ದರು. ಇದರಿಂದಾಗಿ ಅಂದಾಜು 32 ವರ್ಷಗಳ ಕಾಲ ಸೇವೆ ಸಲ್ಲಿಸಿ 1997ರಲ್ಲಿ ನಿವೃತ್ತಿಯಾಗಿದ್ದಾರೆ.




