ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ದಾಳಿ ಹಿನ್ನೆಲೆ:
ಜಮ್ಮು ಮತ್ತು ಕಾಶ್ಮೀರ: ಪಹಲ್ಗಾಮ್ನಲ್ಲಿ ನಡೆದ ಉಗ್ರರ ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ಭಾರತೀಯ ಸೇನೆಯು ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಬುಧವಾರ ಮುಂಜಾನೆ ಕ್ಷಿಪಣಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಶ್ರೀನಗರದಲ್ಲಿರುವ ಶೇಖ್ ಉಲ್-ಆಲಮ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಜೊತೆಗೆ, ವಾಯುವ್ಯ ಭಾರತದ ಹಲವಾರು ವಿಮಾನ ನಿಲ್ದಾಣಗಳನ್ನು ಮುಂದಿನ ಸೂಚನೆ ಬರುವವರೆಗೆ ಬಂದ್ ಮಾಡಲಾಗಿದೆ.
ಭಾರತೀಯ ವಾಯುಪಡೆಯು ಮುಂದಿನ ಸೂಚನೆ ಬರುವವರೆಗೂ ಶ್ರೀನಗರ ವಿಮಾನ ನಿಲ್ದಾಣವನ್ನು ನಿಯಂತ್ರಣಕ್ಕೆ ಪಡೆದಿದೆ. ನಾಗರಿಕ ವಿಮಾನಗಳಿಗೆ ವಾಯುನೆಲೆಯು ತೆರೆದಿರುವುದಿಲ್ಲ ಎಂದು ರಕ್ಷಣಾ ಅಧಿಕಾರಿಗಳು ಹೇಳಿದ್ದಾರೆ. ಅಲ್ಲದೆ, ಶ್ರೀನಗರ ಸೇರಿದಂತೆ ಕೆಲವು ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಸ್ಥಗಿತಗೊಳಿಸಿರುವುದರಿಂದ ವಿಮಾನಯಾನ ಸಂಸ್ಥೆಗಳು ಕೆಲವು ನಗರಗಳಿಂದ ವಿಮಾನ ಸೇವೆ ರದ್ದುಗೊಳಿಸಿವೆ.
ಪ್ರಸ್ತುತ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು, ಜಮ್ಮು, ಶ್ರೀನಗರ, ಲೇಹ್, ಜೋಧ್‌ಪುರ, ಅಮೃತಸರ, ಭುಜ್, ಜಾಮ್‌ನಗರ, ಚಂಡೀಗಢ ಮತ್ತು ರಾಜ್‌ಕೋಟ್‌ಗೆ ವಿಮಾನಗಳ ಹಾರಾಟವನ್ನು ಮಧ್ಯಾಹ್ನದವರೆಗೆ ರದ್ದುಗೊಳಿಸಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ.
“ಅಮೃತಸರಕ್ಕೆ ಹೋಗಬೇಕ್ಕಿದ್ದ ಎರಡು ಅಂತಾರಾಷ್ಟ್ರೀಯ ವಿಮಾನಗಳನ್ನು ದೆಹಲಿಗೆ ಡೈವರ್ಟ್ ಮಾಡಲಾಗಿದೆ. ಈ ಅನಿರೀಕ್ಷಿತ ಅಡಚಣೆಯಿಂದಾಗಿ ಉಂಟಾದ ಅನಾನುಕೂಲತೆಗೆ ನಾವು ವಿಷಾದಿಸುತ್ತೇವೆ” ಎಂದು ವಿಮಾನಯಾನ ಸಂಸ್ಥೆ ಎಕ್ಸ್ ಪೋಸ್ಟ್ ಮಾಡಿದೆ.
ಸ್ಪೈಸ್‌ಜೆಟ್ ಪ್ರಕಟಣೆ ಹೊರಡಿಸಿ, ಸದ್ಯದ ಪರಿಸ್ಥಿತಿಯಿಂದಾಗಿ, ಧರ್ಮಶಾಲಾ, ಲೇಹ್, ಜಮ್ಮು, ಶ್ರೀನಗರ, ಮತ್ತು ಅಮೃತಸರ ಸೇರಿದಂತೆ ಉತ್ತರ ಭಾರತದ ಕೆಲವು ಭಾಗಗಳಲ್ಲಿನ ವಿಮಾನ ನಿಲ್ದಾಣಗಳ ಕಾರ್ಯಾಚರಣೆ ಮುಂದಿನ ಸೂಚನೆ ಬರುವವರೆಗೆ ಸ್ಥಗಿತಗೊಳಿಸಲಾಗಿದೆ ಎಂದು ತಿಳಿಸಿದೆ.
ಶಾಲಾ – ಕಾಲೇಜುಗಳಿಗೆ ರಜೆ: ಜಮ್ಮುವಿನ ಐದು ಗಡಿ ಜಿಲ್ಲೆಗಳಲ್ಲಿರುವ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜಮ್ಮು, ಸಾಂಬಾ, ಕಥುವಾ, ರಾಜೌರಿ ಮತ್ತು ಪೂಂಚ್‌ನಲ್ಲಿರುವ ಎಲ್ಲಾ ಶಾಲೆಗಳು, ಕಾಲೇಜುಗಳು ಮತ್ತು ಶಿಕ್ಷಣ ಸಂಸ್ಥೆಗಳನ್ನು ಇಂದು ಮುಚ್ಚಲಾಗಿದೆ ಎಂದು ವಿಭಾಗೀಯ ಆಯುಕ್ತ ರಮೇಶ್ ಕುಮಾರ್ ಎಕ್ಸ್ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಸೇನೆ ನಡೆಸಿದ ಅಪ್ರಚೋದಿತ ಗುಂಡಿನ ದಾಳಿ ಮತ್ತು ಶೆಲ್ ದಾಳಿಗೆ ಕನಿಷ್ಠ ಮೂವರು ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಭಾರತೀಯ ಸೇನೆ ತಿಳಿಸಿದೆ.




