ಉತ್ತರಾಖಂಡ್: ಖಾಸಗಿ ಹೆಲಿಕಾಪ್ಟರ್ ಪತನಗೊಂಡು ಐವರು ಯಾತ್ರಾರ್ಥಿಗಳು ಮೃತಪಟ್ಟು ಇಬ್ಬರು ಗಾಯಗೊಂಡಿರುವ ಘಟನೆ ಉತ್ತರಾಖಂಡದ ಉತ್ತರಕಾಶಿಯಲ್ಲಿ ಗುರುವಾರ ಬೆಳಿಗ್ಗೆ ಸಂಭವಿಸಿದೆ. ಗರ್ವಾಲ್ ವಿಭಾಗೀಯ ಆಯುಕ್ತ ವಿನಯ್ ಶಂಕರ್ ಪಾಂಡೆ ಅಪಘಾತವನ್ನು ದೃಢಪಡಿಸಿದ್ದು, ಯಾತ್ರಾರ್ಥಿಗಳಿದ್ದ ಹೆಲಿಕಾಪ್ಟ ಡೆಹ್ರಾಡೂನ್ನಿಂದ ಹರ್ಸಿಲ್ ಹೆಲಿಪ್ಯಾಡ್ಗೆ ಹಾರಾಟ ನಡೆಸುತ್ತಿತ್ತು. ಅಲ್ಲಿಂದ ಪುವಾಸಿಗರು ರಸ್ತೆ ಮೂಲಕ ಗಂಗನಾನಿ ಗೆ ಸುಮಾರು 30 ಕಿ.ಮೀ ದೂರವನ್ನು ಕ್ರಮಿಸಬೇಕಿತ್ತು. ಆದರೆ ಈ ನಡುವೆ ಉತ್ತರಕಾಶಿಯಲ್ಲಿ ಹೆಲಿಕಾಪ್ಟರ್ ಪತನಗೊಂಡಿದೆ ಎಂದು ಹೇಳಿದ್ದಾರೆ, ಘಟನಾ ಸ್ಥಳಕ್ಕೆ ರಕ್ಷಣಾ ತಂಡಗಳು ಸ್ಥಳಕ್ಕೆ ಧಾವಿಸಿದೆ ಎಂದು ಹೇಳಿದರು. ಹೆಲಿಕಾಪ್ಟರ್ ನಲ್ಲಿ ಆರು ಮಂದಿ ಪ್ರಯಾಣಿಕರು ಮತ್ತು ಓರ್ವ ಪೈಲೆಟ್ ಸೇರಿ ಒಟ್ಟು ಏಳು ಮಂದಿ ಇದ್ದರು ಎಂದು ಹೇಳಲಾಗಿದೆ.
ಹೆಲಿಕಾಪ್ಟರ್ ಪತನಗೊಂಡು ಯಾತ್ರಾರ್ಥಿಗಳು ಮೃತಪಟ್ಟಿರುವ ವಿಚಾರ ಗೊತ್ತಾಗುತ್ತಿದ್ದಂತೆ ಆಘಾತ ವ್ಯಕ್ತಪಡಿಸಿದ ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಸಾಮಾಜಿಕ ಮಾಧ್ಯಮದಲ್ಲಿ ಮೃತರ ಕುಟುಂಬಕ್ಕೆ ಸಂತಾಪ ಸೂಚಿಸಿದ್ದಾರೆ.




