ಭಾರತ ತಂಡದ ನಾಯಕ ರೋಹಿತ್ ಶರ್ಮಾ ಬುಧವಾರ ಟೆಸ್ಟ್ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ನಡೆದ ಬಾರ್ಡರ್-ಗವಾಸ್ಕರ್ ಟ್ರೋಫಿಯೇ ಅವರ ಕೊನೆಯ ಟೆಸ್ಟ್ ಸರಣಿಯಾಗಿತ್ತು.

ಸಿಡ್ನಿಯಲ್ಲಿ ನಡೆದ ಐದನೇ ಟೆಸ್ಟ್ ಪಂದ್ಯಕ್ಕೆ ರೋಹಿತ್ ತಂಡದಿಂದ ಹೊರಗುಳಿದಿದ್ದರು. ಮುಂಬರುವ ಇಂಗ್ಲೆಂಡ್ ಪ್ರವಾಸದಲ್ಲೂ ರೋಹಿತ್ ಮತ್ತೊಮ್ಮೆ ಭಾರತ ಟೆಸ್ಟ್ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ರೋಹಿತ್ ದಿಢೀರ್ ಟೆಸ್ಟ್ ಕ್ರಿಕೆಟ್ನಿಂದ ದೂರ ಸರಿದಿದ್ದಾರೆ. ಹಠಾತ್ ನಿರ್ಧಾರವು ಸಹಜವಾಗಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಬಿಯಾಂಡ್ 23 ಕ್ರಿಕೆಟ್ ಪಾಡ್‌ಕ್ಯಾಸ್ಟ್‌ನಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಮೈಕೆಲ್ ಕ್ಲಾರ್ಕ್‌ಗೆ ಉತ್ತರಿಸಿದ ರೋಹಿತ್, ”ನನ್ನ ಫಾರ್ಮ್ ಬಗ್ಗೆ ನನಗೆ ತೃಪ್ತಿಯಿಲ್ಲ. ಹೀಗಾಗಿ, ನಾನು ತಂಡದಿಂದ ಹೊರಗುಳಿಯಲು ನಿರ್ಧರಿಸಿದೆ. ಈ ಬಗ್ಗೆ ಕೋಚ್ ಮತ್ತು ಆಯ್ಕೆಗಾರರೊಂದಿಗೆ ಮಾತನಾಡಿ, ಚರ್ಚೆ ನಡೆಸಿದ್ದೇನೆ. ನಾನು ನನ್ನೊಂದಿಗೆ ಪ್ರಾಮಾಣಿಕವಾಗಿರಬೇಕು. ಆಸ್ಟ್ರೇಲಿಯಾ ಟೆಸ್ಟ್ ಸರಣಿಯಲ್ಲಿ ನನಗೆ ರನ್ ಗಳಿಸಲು ಸಾಧ್ಯವಾಗಲಿಲ್ಲ” ಎಂದು ಹೇಳಿದ್ದರು.
ಈ ಹಿಂದೆ ಆಸ್ಟ್ರೇಲಿಯಾದಲ್ಲಿ ಪ್ರತಿಕ್ರಿಯಿಸಿದ್ದ ಅವರು, ನಿವೃತ್ತಿ ಹೊಂದುವ ಯಾವುದೇ ಉದ್ದೇಶವಿಲ್ಲ. ನನ್ನ ಫಾರ್ಮ್ ಸುಧಾರಿಸಿಕೊಳ್ಳುವ ವಿಶ್ವಾಸವಿದೆ ಎಂದು ಹೇಳಿದ್ದರು. ಸಿಡ್ನಿಯಲ್ಲಿ ಸ್ಟಾರ್ ಸ್ಪೋರ್ಟ್ಸ್ ಜೊತೆ ಮಾತನಾಡಿದ್ದ ಅವರು, ”ನಾನು ಇಲ್ಲಿಯವರೆಗೆ ಬಂದಿದ್ದೇನೆ. ಇಲ್ಲಿಗೆ ಪಂದ್ಯ ಆಡದೇ ಹೊರಗೆ ಕುಳಿತುಕೊಳ್ಳಲು ಬಂದಿಲ್ಲ. ನಾನು ಆಟವಾಡಿ ತಂಡವನ್ನು ಗೆಲ್ಲಿಸಬೇಕು. 2007ರಲ್ಲಿ ಮೊದಲ ಬಾರಿಗೆ ಡ್ರೆಸ್ಸಿಂಗ್ ರೂಂಗೆ ಬಂದಾಗಿನಿಂದಲೂ ನಾನು ತಂಡವನ್ನು ಗೆಲ್ಲಿಸಬೇಕೆಂಬುದರ ಬಗ್ಗೆ ಮಾತ್ರ ಯೋಚಿಸಿದ್ದೇನೆ” ಎಂದು ತಿಳಿಸಿದ್ದರು.




